ಕೊಳಚೆ ನೀರಲ್ಲಿ ಪೋಲಿಯೋ ಪತ್ತೆ: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ!

ನ್ಯೂಯಾರ್ಕ್, ಸೆ.೧೨- ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೊಳಚೆ ನೀರಿನಲ್ಲಿ ಪೋಲಿಯೊ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅಮೆರಿಕಾದ ಬೃಹತ್ ನಗರಗಳಲ್ಲಿ ಒಂದಾದ ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಲಾಂಗ್ ಐಲ್ಯಾಂಡ್‌ನ ನಸ್ಸೌ ಕೌಂಟಿಯಲ್ಲಿನ ತ್ಯಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಈ ನೀರಿನಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದೆ. ವೈದ್ಯರು ಮತ್ತು ಪ್ರಮಾಣಿಕೃತ ನರ್ಸ್‌ಗಳು ರೋಗಿಗಳಿಗೆ ಪೋಲಿಯೊ ಲಸಿಕೆ ನೀಡಲು ತುರ್ತು ಆದೇಶದಿಂದ ಸಾಧ್ಯ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಲಸಿಕೆ ನಿರ್ವಾಹಕರನ್ನು ಕೂಡಲೇ ಒಟ್ಟುಗೂಡಿಸಬೇಕೆಂದು ಆದೇಶಿಸಲಾಗಿದೆ. ಗವರ್ನರ್ ಕ್ಯಾಥಿ ಹೊಚುಲ್ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶಿಸಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕದಿದ್ದರೆ ಪಾರ್ಶ್ವವಾಯು ಕಾಯಿಲೆಯ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಲಸಿಕೆ ಪಡೆದುಕೊಳ್ಳದವರು ಶೀಘ್ರ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನ ರಾಕ್‌ಲ್ಯಾಂಡ್ ಕೌಂಟಿಯಲ್ಲಿ ದಶಕದಿಂದೀಚೆಗೆ ಮೊದಲ ಪೋಲಿಯೊ ಪ್ರಕರಣವು ವಯಸ್ಕರಲ್ಲಿ ಕಂಡು ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ನಸಾವು ಗ್ರಾಮದಲ್ಲಿನ ತ್ಯಾಜ್ಯ ನೀರಿನಲ್ಲಿ ವೈರಸ್ ಪತ್ತೆಯಾಗಿರುವುದರಿಂದ, ಲಸಿಕಾಕರಣದ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆಸಲಾಗುವುದು ಎಂದು ತುರ್ತು ಪರಿಸ್ಥಿತಿ ಘೋಷಿಸಿದ ನಗರದ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ. ಲಸಿಕೆ ನಿರ್ವಾಹಕರ ಜಾಲವನ್ನು ವಿಸ್ತರಿಸಿದ್ದು ತುರ್ತು ವೈದ್ಯಕೀಯ ಕಾರ್ಯಕರ್ತರು, ಶುಶ್ರೂಷಕಿಯರು ಮತ್ತು ಔಷಧ ಜ್ಞಾನಿಗಳನ್ನು ಈ ಪಟ್ಟಿಗೆ ಸೇರಿಸಲಾಗುವುದು ಎಂದು ನ್ಯೂಯಾರ್ಕ್ ನ ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ಪೋಲಿಯೊ ಬಗ್ಗೆ ನಿರ್ಲಕ್ಷ ವಹಿಸಲು ಸಾಧ್ಯವಿಲ್ಲ. ನೀವು ಅಥವಾ ನಿಮ್ಮ ಮಗು ಲಸಿಕೆ ಪಡೆಯದಿದ್ದರೆ ಪಾರ್ಶ್ವವಾಯು ಕಾಯಿಲೆಯ ಅಪಾಯ ಹೆಚ್ಚಿರುತ್ತದೆ. ಯಾವುದೇ ಅಪಾಯಕ್ಕೆ ಆಹ್ವಾನ ನೀಡಬೇಡಿ’ ಎಂದು ಆರೋಗ್ಯ ಆಯುಕ್ತೆ ಮೇರಿ ಬ್ಯಾಸೆಟ್ ಜನತೆಗೆ ಸಲಹೆ ನೀಡಿದ್ದಾರೆ. ಒಂದು ಸಮಯದಲ್ಲಿ ಸಾಮಾನ್ಯವಾಗಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೋಲಿಯೊ ಇದೀಗ ಎಲ್ಲಾ ರಂಗದಲ್ಲೂ ಮುಂದುವರೆದ ಅಮೆರಿಕಾದ ಹಲವು ಕಡೆಗಳಲ್ಲಿ ನಿಧಾನವಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಲವರು ಆಘಾತಕಾರಿ ಬೆಳವಣಿಗೆ ಎಂದು ವ್ಯಕ್ತಪಡಿಸಿದ್ದಾರೆ.