ಕೊಳಚೆ ನಿರ್ಮೂಲನಾ ಮಂಡಳಿ ಮನೆಗಳು ಸಿಎಂ ಮೂಲಕ ಉದ್ಘಾಟನೆ

ಸಿಯಾತಲಾಬ್, ಮೈಲಾರ, ಕಾಳಿದಾಸ, ಎಲ್‌ಬಿಎಸ್ ನಗರಗಳಿಗೆ ಶಾಸಕರು ಭೇಟಿ
ರಾಯಚೂರು.ಜು.೨೨- ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಗರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಮನೆಗಳನ್ನು ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ರಾಜ್ಯ ವಸತಿ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಉದ್ಘಾಟಿಸಲಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರು ಇಂದು ಮುಂಜಾನೆ ಸಿಯಾತಲಾಬ್‌ನಲ್ಲಿ ರಾಜಕಾಲುವೆ ಸ್ವಚ್ಚತೆ ವಿಕ್ಷೀಸಿ, ಮೈಲಾರ ನಗರ, ಕಾಳಿದಾಸ ನಗರ ಮತ್ತು ಎಲ್‌ಬಿಎಸ್ ನಗರಕ್ಕೆ ಭೇಟಿ ನೀಡಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣಗೊಳ್ಳುತ್ತಿರುವ ಮನೆಗಳನ್ನು ವೀಕ್ಷಿಸಿ ಮಾತನಾಡಿದರು. ಅತಿ ಶೀಘ್ರವೇ ಮುಖ್ಯಮಂತ್ರಿಯನ್ನು ಆಹ್ವಾನಿಸುವ ಮೂಲಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣಗೊಂಡ ಮನೆಗಳನ್ನು ಉದ್ಘಾಟಿಸಲಾಗುತ್ತದೆ. ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ.
ಕೊಳಚೆ ನಿರ್ಮೂಲನಾ ಮಂಡಳಿಯ ವಸತಿ ಯೋಜನೆಯಡಿ ಸಿದ್ಧಗೊಂಡ ಫಲಾನುಭವಿ ಪ್ರಕ್ರಿಯೆ ಪಟ್ಟಿ ಸರಿಯಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯಲು ಇಂದು ಸಿಯಾತಲಾಬ್, ಮೈಲಾರ ನಗರ, ಕಾಳಿದಾಸ ನಗರ, ಎಲ್‌ಬಿಎಸ್ ನಗರಕ್ಕೆ ಭೇಟಿ ನೀಡಿದ್ದೇನೆ. ಯಾವುದಾದರೂ ಸಮಸ್ಯೆಯಿದ್ದರೆ, ಅದನ್ನು ಪರಿಹರಿಸುವತ್ತ ಕ್ರಮ ಕೈಗೊಳ್ಳಲಾಗುತ್ತದೆ. ತಾಂತ್ರಿಕ ಸಮಸ್ಯೆ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಣೆಯಾಗಿದೆಯೊ? ಇಲ್ಲವೊ? ಎನ್ನುವುದು ಈ ಭೇಟಿಯ ಉದ್ದೇಶವಾಗಿದೆ. ಈ ಬಡಾವಣೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ಬಗ್ಗೆ ಜನ ತಮ್ಮ ಗಮನಕ್ಕೆ ತಂದಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ನಮ್ಮ ಆರ್ಥಿಕ ಸ್ಥಿತಿಗತಿ ಅವಲಂಬಿಸಿ, ಹಂತ ಹಂತವಾಗಿ ಜನರ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ತಿಮ್ಮಾರೆಡ್ಡಿ, ಈರಣ್ಣ, ಜನಾರ್ಧನ ರೆಡ್ಡಿ, ಹರೀಶ ನಾಡಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.