ಕೊಲ್ಹಾರ ತಾಲೂಕಿಗೆ ಭೇಟಿ:ನೀರು ಶುದ್ಧೀಕರಣ ಘಟಕ ಪರಿಶೀಲನೆ ನಡೆಸಿದ ಜಿಪಂ ಸಿಇಓ ರಾಹುಲ್ ಶಿಂಧೆ

ವಿಜಯಪುರ:ಜೂ.8: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜೂ.6ರಂದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣ ಮತ್ತು ಕೊಲ್ಹಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನಗೂಳಿ ಸೇರಿದಂತೆ 35 ಗ್ರಾಮಗಳ ಬಹು ಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ತೆಲಗಿ ಗ್ರಾಮದ ಹತ್ತಿರ ಇರುವ ನೀರು ಶುದ್ಧೀಕರಣ ಘಟಕದ ವೀಕ್ಷಣೆ ಮಾಡಿ, ಘಟಕದಲ್ಲಿ ನೀರು ಶುದ್ಧಿಕರಣದ ಬಗ್ಗೆ ವಿವರ ಮಾಹಿತಿಯನ್ನು ಘಟಕ ನಿರ್ವಹಿಸುವ ಅಧಿಕಾರಿಗಳಿಂದ ಪಡೆದುಕೊಂಡರು. ಇದೇ ಯೋಜನೆಗೆ ಸಂಬಂಧಪಟ್ಟ ಬಳೂತಿ ಗ್ರಾಮದ ಹತ್ತಿರವಿರುವ ಜಾಕವೆಲ್‍ಗೆ ಕೃಷ್ಣಾ ನದಿ ನೀರಿನ ಮಟ್ಟ ಕಡಿಮೆ ಆಗಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುವುದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳು ವಿವರಿಸಿದರು.
ಕೊಲ್ಹಾರ ತಾಲೂಕಿನ ಕೊಲ್ಹಾರ ಮತ್ತು ಇತರೆ 8 ಗ್ರಾಮಗಳ ಬಹು ಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಘಟಕದಲ್ಲಿ ನಿರ್ವಹಿಸುತ್ತಿರುವ ನೀರು ತಪಾಸಣಾ ವಹಿ, ಹಾಜರಾತಿ ಪುಸ್ತಕ ಮತ್ತು ವೀಕ್ಷಕರ ವಹಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು. ನೀರು ಶುದ್ಧೀಕರಣ ಘಟಕದಲ್ಲಿ ನಿಯಮಾನುಸಾರ ಶುದ್ಧಗೊಳಿಸಿ ತದನಂತರ ಮತ್ತೆ ನೀರು ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡು ಸಾರ್ವಜನಿಕರಿಗೆ ಸರಬರಾಜು ಮಾಡಲು ಸೂಚಿಸಿದರು.
ಗ್ರಾಮದ ಜನರಿಗೆ ಶುದ್ಧ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಸರಬರಾಜು ಮಾಡುವಂತೆಯೂ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೆಸ್ಕಾಂ ಅಧಿಕಾರಿಗಳಿಗೆ ಸಮರ್ಪಕವಾಗಿ ಹಾಗೂ ನಿರಂತರವಾಗಿ ನಿಗದಿತ ವಿದ್ಯುತ್ತನ್ನು ಒದಗಿಸಲು ಸೂಚಿಸಿದರು.
ದೇವರಗೆಣ್ಣೂರ ಗ್ರಾಮದ ಹತ್ತಿರ ಪ್ರಗತಿಯಲ್ಲಿರುವ ತಿಕೋಟಾ ಬಹು ಹಳ್ಳಿ ಕುಡಿಯುವ ನೀರು ಯೋಜನೆಯ ಜಾಕವೆಲ್ ಪುಟ್ ಬ್ರಿಜ್ ಕಾಮಗಾರಿಯನ್ನು ವೀಕ್ಷಣೆ ಮಾಡಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ನೀರು ಕಲುಷಿತಗೊಳ್ಳದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಶೇಖರಣಾ ಘಟಕದಲ್ಲಿ ಮತ್ತು ಘಟಕದ ಸುತ್ತ-ಮುತ್ತ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನೀರನ್ನೂ ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಸರಬರಾಜು ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ್ ಕುಂಬಾರ, ಕೊಲ್ಹಾರ ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಎಫ್. ಹೆಚ್. ಪಠಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಬಿ. ಪಾಟೀಲ್, ಕೊಲ್ಹಾರ ತಾಲೂಕ ಪಂಚಾಯಿತಿಯ ಸಹಾಯಕ ನಿರ್ದೇಶಕರು (ನರೇಗಾ) ವಿ.ಎಸ್.ಹಿರೇಮಠ್ ಹಾಗೂ ಬಸವನ ಬಾಗೇವಾಡಿಯ ಸಹಾಯಕ ಇಂಜಿನಿಯರ ವಿ. ಬಿ. ಗುಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.