ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆ

ಉಡುಪಿ, ಎ.೨೭- ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆಯಾಗಿದ್ದಾರೆ.

ವ್ಯವಸ್ಥಾಪನಾ ಸಮಿತಿ ಆಯ್ಕೆಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಡಾ.ಅತುಲ್ ಕುಮಾರ್ ಶೆಟ್ಟಿ ಮತ್ತು ಚಂದ್ರಶೇಖರ ಶೆಟ್ಟಿ ಉಮೇದುದಾರರಾಗಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು 5 ಮತಗಳನ್ನು, ಡಾ.ಅತುಲ್ ಕುಮಾರ್ ಶೆಟ್ಟಿ 4 ಮತಗಳನ್ನು ಪಡೆದರು. ಆರು ತಿಂಗಳ ಹಿಂದೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ನಡೆದಿದ್ದು, ಆದರೆ, ಅಧ್ಯಕ್ಷರ ಆಯ್ಕೆ ಮಾತ್ರ ಆಗಿರಲಿಲ್ಲ. ಹಾಗಾಗಿ ಎಪ್ರಿಲ್‌ 26ರ ಸೋಮವಾರದಂದು ಚುನಾವಣೆ ಏರ್ಪಟ್ಟಿತ್ತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ಶೆಟ್ಟಿ ಮಾತನಾಡಿ, “ಈ ಜಾಗದಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅತ್ಯಂತ ಸಂತೋಷವಾಗುತ್ತದೆ. ಇಲ್ಲಿ ಅಧ್ಯಕ್ಷರು, ಸದಸ್ಯರು ಎಂಬ ಯಾವುದೇ ಬೇಧವಿಲ್ಲದೆ ಕೆಲಸ ಮಾಡಬೇಕು. ಸ್ವಾರ್ಥವಿಲ್ಲದೆ ನಿಸ್ವಾರ್ಥತೆಯಿಂದ ಸೇವೆ ಮಾಡುವ ಅವಕಾಶ ನಮಗೆ ಲಭಿಸಿದೆ. ಕೋಟಿ ಕೋಟಿ ಭಕ್ತಾಧಿಗಳ ಮನದ ಬಯಕೆಗಳನ್ನು ಮೂಕಾಂಬಿಕೆ ಈಡೇರಿಸಿದ್ದಾಳೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕೊಲ್ಲೂರು ಕೇವಲ ಧಾರ್ಮಿಕತೆ ಮಾತ್ರವಲ್ಲದೇ ಶೈಕ್ಷಣಿಕವಾಗಿಯೂ ಗುರುತಿಸಿಕೊಂಡಿದೆ. ಕ್ಷೇತ್ರದ ಅಭಿವೃದ್ದಿ, ಶುಚಿತ್ವಕ್ಕೆ ಆದ್ಯತೆ ನೀಡುತ್ತಾ, ಹಿರಿಯರ, ಗ್ರಾಮಸ್ಥರ ಸಹಕಾರ ಮಾರ್ಗದರ್ಶನ ಪಡೆದುಕೊಳ್ಳುತ್ತಾ, ಗರಿಷ್ಠ ಮಟ್ಟದಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತೇವೆ. ನನ್ನನ್ನು ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಿದ ಸರ್ಕಾರಕ್ಕೂ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಕೆ.ರಾಜು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.