ಕೊಲೆ ಬೆದರಿಕೆ ಆರೋಪ: ಪೊಲೀಸ್‌ ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ಕೇಸ್‌

ಮಂಗಳೂರು, ಸೆ.1೩- ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿ ಸಹಿತ ನಾಲ್ಕು ಮಂದಿಯ ವಿರುದ್ಧ ನ್ಯಾಯಾಲಯದ ಸೂಚನೆಯಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಕೋಟೆಕಾರು ಗ್ರಾಮದ ಕೊಂಡಾಣ ಎಂಬಲ್ಲಿ ಕರುಣಾಕರ ಪೂಜಾರಿ ಜಮೀನು ಖರೀದಿಸಿದ್ದು, ಈ ಜಮೀನಿಗೆ ಹೋಗಲು ರಸ್ತೆ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು ಬಳಿಕ ರಸ್ತೆ ಮಾಡಿಸದೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಕರುಣಾಕರ ಪೂಜಾರಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ 3 ತೆಂಗಿನ ಮರಗಳನ್ನು ಕಡಿದಿದ್ದರು. ಇದಕ್ಕೆ ಜಾಗ ಮಾರಾಟ ಮಾಡಿದ್ದ ಮಾಲಕರ ಅಳಿಯ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಭುವನೇಶ್ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಕರುಣಾಕರ ಪೂಜಾರಿಯ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರುಣಾಕರ ಪೂಜಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳದ ಕಾರಣ ನ್ಯಾಯಾಲಯಕ್ಕೆ ಖಾಸಗಿ ದಾವೆ ಹೂಡಿದ್ದರು. ನ್ಯಾಯಾಲಯವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉಳ್ಳಾಲ ಪೊಲೀಸರಿಗೆ ನಿರ್ದೇಶನ ನೀಡಿದೆ. ಅದರಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರುಣಾಕರ ಪೂಜಾರಿಯ ಪರವಾಗಿ ನ್ಯಾಯವಾದಿ ಮನೋಹರ ಪಿ. ವಾದ ಮಂಡಿಸಿದ್ದರು.