ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಸಜೆ

ಕಲಬುರಗಿ ಏ 4: ಅಫಜಲಪುರ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ ಮೂವರಿಗೆ ಕಲಬುರಗಿಯ ವಿಶೇಷ 1 ನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಉಪ್ಪಾರಹಟ್ಟಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಮಹಾದೇವ ಚಂದ್ರಾಮ ಕಾಳೆ ಎಂಬ ವ್ಯಕ್ತಿಯನ್ನು 2016 ರ ನವೆಂಬರ್ 2 ರಂದು ಕೊಲೆ ಮಾಡಲಾಗಿತ್ತು. ಉಪ್ಪಾರಹಟ್ಟಿ ಗ್ರಾಮದ ಗೋಪು ಉರ್ಫ ಗೋಪಾಲ ಭೀಮಶಾ ಯಡಾವಿ, ನ್ಯಾನು ಉರ್ಫ ನಾರಾಯಣ ಮಾಳಪ್ಪ ಯಡಾವಿ ಮತ್ತು ಅಮೋಘಸಿದ್ಧ ಭೀಮಶಾ ಯಡಾವಿ ಎಂಬುವವರು ಸೇರಿ ಮಹಾದೇವನನ್ನು ಹತ್ಯೆ ಮಾಡಿದ್ದರು.
ಗೋಪಾಲನ ಸಂಬಂಧಿಕರ ಪೈಕಿ ಮಹಿಳೆಯೊಬ್ಬರ ಜೊತೆಗೆ ಮಹಾದೇವನು ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನವೇ ಕೊಲೆಗೆ ನಡೆಯಲು ಕಾರಣವಾಗಿತ್ತು.ಈ ಕುರಿತು ಮಹಿಳೆ ಸ್ವತಃ ನ್ಯಾಯಾಲಯದಲ್ಲಿ ಸಾಕ್ಷಿ ನೀಡಿದ್ದರು. ಕೊಲೆ ಪ್ರಕರಣ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ 1 ನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್ ಅವರು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.ದಂಡದಿಂಧ ಬಂದ ಹಣದಲ್ಲಿ ಮೃತನ ಪತ್ನಿಗೆ 50 ಸಾವಿರ ರೂ ನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ 1 ನೆಯ ಹೆಚ್ಚುವರಿ ಸರಕಾರಿ ಅಭಿಯೋಜಕ ಎಸ್ ಆರ್ ನರಸಿಂಹಲು ವಾದ ಮಂಡಿಸಿದ್ದರು.