ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ನ22:ನಗರದ ಕೇಂದ್ರ ಬಸ್ ನಿಲ್ದಾಣದ ಎದುರು 2019ರ ಜ.10 ರಂದು ಬೆಳಗಿನ ಜಾವ ರಸ್ತೆ ಮೇಲೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ ಇಲ್ಲಿನ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಒಟ್ಟು 40 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಮ್ಯಾನೇಜರ್ ಕೆಲಸದಿಂದ ತೆಗೆದುಹಾಕಿ ವೈಯಕ್ತಿಕವಾಗಿ ಹೀಯಾಳಿಸಲಾಗಿದೆ ಎಂಬ ಉದ್ದೇಶದಿಂದ ಮಲ್ಲಿಕಾರ್ಜುನ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಸಂತೋಷ ಲಕ್ಷ್ಮಿಕಾಂತಯ್ಯ ಸ್ವಾಮಿ ಮತ್ತು ನಾಗರಾಜ ಸಿದ್ದಲಿಂಗಯ್ಯ ಬಜಾರಮಠ ಎಂಬುವರು ಬೈಕ್ ಮೇಲೆ ಬಂದು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದರು.ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿ, ಕೊಲೆ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಶರಣಬಸಪ್ಪ ಎಂಬಾತನಿಗೆ 5 ವರ್ಷ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು