
ದಾವಣಗೆರೆ: ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿ ವಾಪಾಸ್ಸಾಗುತ್ತಿದ್ದ ವೇಳೆ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ ಪ್ರಕರಣದಲ್ಲಿ ಓರ್ವ ಮೃತ ಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬಂಧಿಸಿ, ಪ್ರಕರಣ ಕುರಿತಂತೆ ವಿಚಾರಣ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಬಂಧಿತರನ್ನು ತಮಿಳು ಸುನೀಲ್, ವೆಂಕಟೇಶ್, ಅಭಿಲಾಷ್ ಹಾಗೂ ಪವನ್ ಎಂದು ತಿಳಿಸಿದರು.
ಶಿವಮೊಗ್ಗದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ, ವಾಪಾಸ್ಸಾಗುತ್ತಿದ್ದ ಹರಿಹರ ತಾಲೂಕಿನ ಅಂಜಿನಿ ಅಲಿಯಾಸ್ ಆಂಜನೇಯ ಹಾಗೂ ಮಧು ಎಂಬ ಇಬ್ಬರ ಮೇಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡ ತಲ್ವಾರ್‌ನಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆಂಜನೇಯ ಎನ್ನುವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, ಮಧು ಎನ್ನುವ ವ್ಯಕ್ತಿಗೆ ಗಂಭೀರವಾದ ಗಾಯಗಳಾಗಿದ್ದವು.
ಈ ಪ್ರಕರಣ ಕುರಿತಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾದ ನಾಲ್ವರನ್ನು ಶಿಗ್ಗಾವಿಯಲ್ಲಿ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಸಂಬಂಧಪಟ್ಟ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ನಂತರ ಇನ್ನುಳಿದಂತೆ ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಎಸ್‌ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.
ಪ್ರಕರಣದ ವಿವರ: ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಧು ಹಾಗೂ ಆಂಜನೇಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ, ಊರಿಗೆ ಬೈಕ್‌ನಲ್ಲಿ ಮರಳುತ್ತಿದ್ದರು.
ಬೈಕ್‌ನಲ್ಲಿ ಭಾನುವಳ್ಳಿ ಗ್ರಾಮದ ಮಧು ಹಾಗೂ ಆಂಜನೇಯ ಬರುವಾಗ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಇಬ್ಬರನ್ನೂ ಸ್ಕಾರ್ಪಿಯೋ ವಾಹನದಲ್ಲಿದ್ದವರು ಅಡ್ಡಗಟ್ಟಿ ತಡೆದು, ತಲ್ವಾರ್‌ನಿಂದ ದಾಳಿ ಮಾಡಿದ್ದಾರೆ. ಏಕಾಏಕಿ ಹರಿತವಾದ ತಲ್ವಾರ್‌ನಿಂದ ದಾಳಿ ಮಾಡಿದ್ದರಿಂದ ತಲೆ, ಕುತ್ತಿಗೆ, ಕೈಗಳಿಗೆ ತೀವ್ರ ಗಾಯವಾಗಿ, ಭಾನುವಳ್ಳಿಯ ಆಂಜನೇಯ
ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬೆರಳು, ಕುತ್ತಿಗೆ, ತಲೆಗೆ ತೀವ್ರ ಗಾಯಗೊಂಡಿದ್ದ ಮಧು ತೀವ್ರ ನಿತ್ರಾಣನಾಗಿ, ಕುಸಿದು ಬಿದ್ದಿದ್ದು ಆತನನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳದಲ್ಲಿ ಮಧು, ಆಂಜನೇಯನ ಮೇಲೆ ತಲ್ವಾರ್ ಬೀಸಿದ ತಂಡವು ತಂದಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ
ನಿಂತಿದ್ದು, ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್, ಹೊನ್ನಾಳಿ, ನ್ಯಾಮತಿ ವೃತ್ತ ನಿರೀಕ್ಷಕರು, ಎಸ್‌ಐ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದರು.
ದಾಳಿಯ ಉದ್ದೇಶ ದ್ವೇಷ: ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸಮೀಪವೇ ಅಲ್ಲಿನ ಕುಖ್ಯಾತ ರೌಡಿ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂದಿ ಅಣ್ಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನರನ್ನು ಪೊಲೀಸರು ಬಂಧಿಸಿದ್ದು, ಈ ಪೈಕಿ
ನ್ಯಾಮತಿ ತಾಲೂಕಿನಲ್ಲಿ ಸ್ಕಾರ್ಪಿಯೋದಲ್ಲಿ ಬಂದ ಗುಂಪಿನಿಂದ ಭೀಕರವಾಗಿ ಹತ್ಯೆಯಾದ ಹರಿಹರ ತಾಲೂಕಿನ ಭಾನುವಳ್ಳಿಯ ಆಂಜನೇಯ ಹಾಗೂ ಮಧು ಸಹ ಜೈಲು ಪಾಲಾಗಿದ್ದರು. ೮ ಜನ ಆರೋಪಿಗಳ ಪೈಕಿ ಮಧು, ಆಂಜನೇಯಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಆಂಜನೇಯ ಹಾಗೂ ಮಧು ಮೇಲೆ ಎದುರಾಳಿಗಳ ತಂಡ ದಾಳಿ ಮಾಡಿದ್ದಾರೆ.