ಕೊಲೆ ಪ್ರಕರಣ:ಇಬ್ಬರಿಗೆ ಜೀವಾವಧಿ, ಒಬ್ಬನಿಗೆ 10 ವರ್ಷ ಶಿಕ್ಷೆ

ಕಲಬುರಗಿ ಸೆ 9:ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಯಾದುಲ್ಲ ಕಾಲೋನಿಯ ನಿವಾಸಿ ಮಹ್ಮದ್ ಗೌಸುದ್ದೀನ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ, ಮೂವರಿಗೆ ಕಲಬುರಗಿಯ 3 ನೇ ಅಪರ ಜಿಲ್ಲಾ ಮತ್ತುಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ.
ನಗರದ ಅರಾಫತ್ ಕಾಲೋನಿ ಫಯಾಜ್ ಅಲಿಯಾಸ್ ಮಹ್ಮದ್ ಪೈಯಾಜೋದ್ದಿನ್ , ಆಜಾದಪುರ ಕಾಲೋನಿಯ,ನಿಜಾಮ ಅಲಿಯಾಸ್ ಶೇಖ ನಿಜಾಮೊದ್ದಿನ್ ಬಾವರ್ಚಿ ಮತ್ತು ಮಿಲ್ಲತ್ ನಗರದ ವಾಜೀದ ಅಲಿಯಾಸ್ ಶೇಖವಾಜೀದ ಶಿಕ್ಷೆಗೊಳಗಾದವರು.ಇವರಲ್ಲಿ ಮೊದಲ ಇಬ್ಬರಿಗೆ ಜೀವಾವಧಿ ಮತ್ತು ಕೊನೆಯವನಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ಮೂವರಿಗೆ ಒಟ್ಟು 55 ಸಾವಿರ ರೂ ದಂಡ ವಿಧಿಸಿದ್ದಾರೆ.
ಘಟನೆಯ ವಿವರ:
ಯಾದುಲ್ಲ ಕಾಲೋನಿಯ ನಿವಾಸಿ ಮಹ್ಮದ್ ಗೌಸುದ್ದೀನ್‍ಗೆ ಹಳೆಯ ವಾಹನ ಮಾರಾಟ ಮಾಡಿದ ಈ ಮೂವರು ನಂತರ ಇನ್ನೂ ಹೆಚ್ಚಿನ ಹಣ ಕೊಡಬೇಕು ಎಂದು ತಕರಾರು ತೆಗೆದು ಜೀವ ಬೆದರಿಕೆ ಹಾಕಿದ್ದಾರೆ.
2020 ರ ಅಕ್ಟೋಬರ್ 22 ರಂದು ಗೌಸುದ್ದೀನ್ ನನ್ನು ಕಾರಿನಲ್ಲಿ ಅಪಹರಿಸಿ ಕೊಂಡು ಹೋಗಿ ಹಗ್ಗದಿಂದ ಉಸಿರುಗಟ್ಟಿಸಿ ಸಾಯಿಸಿ ಶವವನ್ನು ಕುರಿಕೋಟಾ ಗ್ರಾಮದ ಹಳೆಯ ಸೇತುವೆ ಕೆಳಗೆ ಎಸೆದಿದ್ದಾರೆ.ಪ್ರಕರಣ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ನ್ಯಾಯಾಲಯದಲ್ಲಿ ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.