ಕೊಲೆ, ದೊಂಬಿ, ಹಿಂಸಾಚಾರ ಪ್ರಕರಣ: ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಉದ್ರಿಕ್ತರಿಂದ ರಸ್ತೆ ತಡೆ ಚಳುವಳಿ

ಕಲಬುರಗಿ:ಮಾ.30:ನಗರದ ಸುಂದರನಗರದ ಬಡಾವಣೆಗೆ ನುಗ್ಗಿದ ಕಿಡಿಗೇಡಿಗಳ ಗುಂಪು ದೊಂಬಿ, ಹಿಂಸಾಚಾರದಲ್ಲಿ ತೊಡಗಿ ಅರಾಜಕತೆ ಸೃಷ್ಟಿಸಿರುವ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಬಿ. ಶಾಮಸುಂದರ್ ನಗರ ಬಡಾವಣೆಯ ನಾಗರಿಕರು ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ತಡೆ ಚಳುವಳಿ ಮಾಡಿದರು.

ಪ್ರತಿಭಟನೆಕಾರರು ನಗರ ಪೋಲಿಸ್ ಉಪ ಆಯುಕ್ತ ಡಿ. ಕಿಶೋರಬಾಬು ಅವರ ಮೂಲಕ ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಹೋಳಿ ಹಬ್ಬದ ದಿನದಂದು ಹೋಳಿ ಆಡಿ ಸಂತೋಷದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಸಂಜೆ 4-30ರ ಸುಮಾರಿಗೆ ಮಾಂಗರವಾಡಿ ಸಮುದಾಯದ ಸುಮಾರು 200ರಿಂದ 250 ಜನರಿರುವ ತಂಡವು ದಾಳಿ ಮಾಡಿದೆ. ದಾಳಿ ಮಾಡಿದವರಲ್ಲಿ ಪೋಪಟಲಾಲ್ ಉಪಾಧ್ಯಾಯ, ರಮಾನಂದ್ ಪೋಪಟಲಾಲ್ ಉಪಾಧ್ಯಾಯ, ವಿಠಲ್ ಪಾನಪ್ಪಾ ಪೂಜಾರಿ, ರಾಣಿ ತಂದೆ ದೇವಿದಾಸ್, ರಮೇಶ್ ಉಪಾಧ್ಯಾಯ, ಕುಂದನ್, ರಾಜೇಶ್, ಗೌರಮ್ಮ, ದೇವಿದಾಸ್, ಸದಾಶಿವ್ ಉಪಾಧ್ಯಾಯ, ಶಾಹಿರ್ ಪಟೇಲ್, ಸಂಜಯ್ ಪಾಟೀಲ್, ದಿಲದಾರ್ ಉಪಾಧ್ಯಾಯ, ಅಮಿತ್ ಪಾಟೀಲ್ ಮುಂತಾದವರು ಸೇರಿದ್ದಾರೆ ಎಂದು ಆರೋಪಿಸಿದರು.
ಬಡಾವಣೆಯನ್ನು ಕೇಂದ್ರೀಕರಿಸಿಕೊಂಡು ಹೆದರಿಸಿ, ಬೆದರಿಸುವ ಮೂಲಕ ಇಲ್ಲಿಂದ ಹೊಡೆದೋಡಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ನಿನ್ನಿನ ಘಟನೆಯನ್ನು ನೋಡಿದರೆ ನಗರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಂಗಾಡೆರ್ ನಾಯಕರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಗಡಿಪಾರು ಮಾಡುವಂತೆ, ಮನೆಗಳಲ್ಲಿ ಹಣ, ಒಡವೆ, ಬಂಗಾರ ಕಳ್ಳತನ ಮಾಡಿರುವುದನ್ನು ಮರಳಿ ವಶಪಡಿಸಿಕೊಳ್ಳುವಂತೆ, ದೌರ್ಜನ್ಯದಿಂದ ಹಾಳಾಗಿರುವ ವಾಹನಗಳ ಮಾಲಿಕರಿಗೆ ಜಿಲ್ಲಾಡಳಿತದಿಂದ ಹೊಸ ವಾಹನಗಳನ್ನು ಕೊಡುವಂತೆ ಅವರು ಒತ್ತಾಯಿಸಿದರು.
ಬಿ. ಶಾಮಸುಂದರ್ ಬಡಾವಣೆಯ ಪಕ್ಕದಲ್ಲಿರುವ ಕಾನೂನು ಬಾಹಿರ ಮಾಂಗಾಡೆರ್ ವಸತಿ ಪ್ರದೇಶವನ್ನು ನಗರದ ಹೊರಗಡೆ ಸ್ಥಳಾಂತರಿಸುವಂತೆ, ಅವರನ್ನು ಸ್ಥಳಾಂತರಿಸುವವರೆಗೂ ಶಾಮಸುಂದರ್ ಬಡಾವಣೆಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಮುಂದೆ ಏನಾದರೂ ಅನಾಹುತ ಆದಲ್ಲಿ ಅದಕ್ಕೆ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಬಡಾವಣೆಯಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಪೋಲಿಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಸಹ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಮಾಜಿ ಮೇಯರ್ ದಶರಥ್ ಬಾಬು ಒಂಟಿ, ಜಗದೀಶ್ ವಳಕೇರಿ, ಸುರೇಶ್ ಭರಣಿ, ಎಸ್.ಎಸ್. ತೌಡೆ, ವಿಠಲ್ ವಗ್ಗನ್, ಸಚಿನ್ ಫರತಾಬಾದ್, ರಾಘವೇಂದ್ರ ಫರತಾಬಾದಕರ್, ಸುಭಾಷ್ ಫರತಾಬಾದ್, ಪೃಥ್ವಿ ಬೋಧನಕರ್, ಲಕ್ಷ್ಮಣ್ ಮೂಲಭಾರತಿ, ಭವಾನಿ ದರ್ಗಿ, ಪರಮೇಶ್ವರ್ ಅ. ಖಾನಾಪುರ, ವಿಶಾಲ್ ಎಸ್. ದರ್ಗಿ, ಅವಿನಾಶ್ ಗಾಯಕವಾಡ್, ಪ್ರಕಾಶ್ ಅವರಾದಕರ್, ಅಶ್ವಿನ್ ಬಿ. ಸಂಕಾ, ಬಿ. ನಾಗೇಶ್ ಸರಡಗಿಕರ್, ಪ್ರಕಾಶ್ ಅಷ್ಟಗಿ, ಸಿದ್ದಾರ್ಥ ಜಿ. ಕೋರವಾರ್, ರಾಜು ಸಂಕಾ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.