ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ

ವಿಜಯಪುರ ನ.07: ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ 2019ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನ ಸಾಕ್ಷಿದಾರರ ಸಾಕ್ಷ್ಯ ವಿಚಾರಣೆಯನ್ನು ಮತ್ತು 33 ದಾಖಲಾತಿಗಳ ಆಧಾರದ ಮೇಲೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ ಎಲ್.ಪಿ. ಅವರು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ದಿನಾಂಕ : 02-11-2023 ತೀರ್ಪು ನೀಡಿದ್ದಾರೆ.
ಕೊಲೆ ಮಾಡಿದ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದ ಸಾಬಣ್ಣ ತಂದೆ ಗಂಗಪ್ಪ ಉಕ್ಕಲಿ ಆರೋಪಿಗೆ ಕಲಂ 302 ಐಪಿಸಿ ಅಡಿಯಲ್ಲಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅದರಂತೆ ಕಲಂ 506 ಐಪಿಸಿ ಅಡಿಯ ಅಪರಾಧಕ್ಕೆ 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ.ದಂಡ, ಕಲಂ 3(1)(ಆರ್) ಎಸ್.ಸಿ./ಎಸ್.ಟಿ. ರಡಿ ಅಪರಾಧಕ್ಕೆ 5 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ, ಕಲಂ 3(2)(ವ್ಹಿ) ಎಸ್.ಸಿ./ಎಸ್.ಟಿ. ಅಡಿ ಅಪರಾಧಕ್ಕೆ 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಎಸ್.ಎಸ್.ಲೋಕೂರ ಅವರು ವಾದ ಮಂಡಿಸಿದ್ದರು. ಮುದ್ದೇಬಿಹಾಳ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆಯ ನಂತರ ಆರೋಪಿತನ ಮೇಲೆ ಬಸವನಬಾಗೇವಾಡಿ ಡಿವೈಎಸ್‍ಪಿ ಮಹೇಶ್ವರಗೌಡ ಎಸ್.ಯು. ದೋಷಾರೋಪನೆ ಪತ್ರ ಸಲ್ಲಿಸಿದ್ದರು ಎಂದು ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಲೋಕೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.