ಕೊಲೆ ಆರೋಪಿಗಳ ಬಂಧನ

ಕೋಲಾರ,ಮೇ ೨:ಮದುವೆ ಮಾಡಿಕೊಳ್ಳಲು ಪೀಡಿಸಿದ ಕಂಪ್ಯೂಟರ್ ಸೆಂಟರ್‍ನ ಮಾಲೀಕನನ್ನು ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿಸಿದ ಯುವತಿಯು ಸೇರಿ ಮೂವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನ ಮಹಾರಾಜ ರಸ್ತೆಯಲ್ಲಿ ಏ.೨೮ರಂದು ಸಂಜೆ ೭.೩೦ರಲ್ಲಿ ನಡೆದ ಕಂಪ್ಯೂಟರ್ ಸೆಂಟರ್‍ನ ಮಾಲೀಕ ಮುಕುಂದನ್ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಜ ರಸ್ತೆಯಲ್ಲಿ ಋಷಿಕೇಶ್ ಕಂಪ್ಯೂಟರ್ ಸೆಂಟರ್ನ ಡಾ.ಅಂಬೇಡ್ಕರ್ ನಗರದ ನಿವಾಸಿ ಮುಕುಂದನ್ (೨೭) ಅವರು ನಡೆಸುತ್ತಿದ್ದು, ಇದರಲ್ಲಿ ಪೈಫ್‌ಲೈನ್ ನಿವಾಸಿ ಅಶ್ವತಿ ಎಂಬಾಕೆಯು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಳು. ಕಳೆದ ೬ ತಿಂಗಳಿಂದ ಮದುವೆಯಾಗುವಂತೆ ಮುಕುಂದನ್ ಪೀಡಿಸಿದ್ದರಿಂದ ಈಕೆ ಕೆಲಸವನ್ನು ಸಹ ಬಿಟ್ಟಿದ್ದರು, ಆದರೂ ಮುಕುಂದನ್ ದೂರವಾಣಿ
ಮೂಲಕ ಅಶ್ವತಿಯನ್ನು ವಿವಾಹದ ವಿಚಾರದಲ್ಲಿ ಪೀಡಿಸುತ್ತಿದ್ದರ ಹಿನ್ನೆಲೆಯಲ್ಲಿ, ಅಶ್ವತಿ ತನ್ನ ಪ್ರಿಯಕರ ರಾಜೇಂದ್ರ ಪ್ರಸಾದ್ ಅವರೊಂದಿಗೆ ಈ ಎಲ್ಲಾ ವಿಷಯವನ್ನು ಹಂಚಿಕೊಂಡಿದ್ದಾಳೆ. ಮುಕುಂದನನ್ನು
ಮುಗಿಸದಿದ್ದಲ್ಲಿ ತಮ್ಮಿಬ್ಬರಿಗೆ ನೆಮ್ಮದಿ ಇರುವುದಿಲ್ಲವೆಂತ ಪ್ರಚೋದಿಸಿ
ರಾಜೇಂದ್ರಪ್ರಸಾದ್, ಆತನ ಸಂಬಂಧಿ ಮೇಲ್ವಿನ್ ಅವರುಗಳ ಜೊತೆಗೂಡಿ ಏ.೨೮ ರಂದು ಸಂಜೆ ಮುಕುಂದನ್ ಅವರ ಕಂಪ್ಯೂಟರ್ ಸೆಂಟರ್‍ಗೆ ಹೋಗಿ ಲಾಂಗ್ ಮತ್ತು ರಾಡಿನಿಂದ ಒಡೆದು, ಕೊಲೆ ಮಾಡಿರುತ್ತಾರೆ.
ಈ ಸಂಬಂಧ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಎಸ್‌ಪಿ
ಇಲಕ್ಕಿಯಾ ಕರುಣಾಕರನ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ತಂಡವನ್ನು ರಚಿಸಿದ್ದು, ಪೊಲೀಸರು ಆರೋಪಿಗಳಾದ ಪೈಫ್‌ಲೈನಿನ ನಿವಾಸಿ ರಾಜೇಂದ್ರಪ್ರಸಾದ್ (೩೫), ಈ.ಟಿ.ಬ್ಲಾಕೀನ ನಿವಾಸಿ ಆರ್. ಮೆಲ್ವಿನ್ (೨೬) ಮತ್ತು ಪೈಫ್‌ಲೈನ್ ನಿವಾಸಿ ಅಶ್ವತಿ @ ಅಶೃತಿ (೨೫) ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ಸಿಪಿಐ ಕೆ. ನಾಗರಾಜ್, ಪಿಎಸ್‌ಐ ಶೃತಿ, ಸಿಬ್ಬಂದಿಗಳಾದ ವೆಂಕಟೇಶ್, ಗಜೇಂದ್ರ, ಮಹೇಂದ್ರಕುಮಾರ್, ಚೇತನ್‌ಕುಮಾರ್, ನಾರಾಯಣಸ್ವಾಮಿ, ಗೋಪಾಲ್, ಶ್ರೀನಿವಾಸ, ಮಂಜುನಾಥ, ಎಸ್.ಚಂದ್ರಕುಮಾರ್, ನವೀನ್, ಮನೋಹರ್, ಮೋಹನ್ ಅವರುಗಳು ತೀವ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.