
ಕಲಬುರಗಿ,ಮಾ.19-ಕೊಲೆ ಮಾಡಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ.ದಂಡ ವಿಧಿಸಿ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಜೇವರ್ಗಿ ತಾಲ್ಲೂಕಿನ ಯಾತನೂರ ಗ್ರಾಮದ ದೇವಪ್ಪ ಬಿರಾದಾರ ಮತ್ತು ಮಲ್ಲಿಕಾರ್ಜುನ ಹಡಪದ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಯಾತನೂರ ಗ್ರಾಮದ ದೇವಪ್ಪ ಬಿರಾದಾರ ಅವರ ಚಿಕ್ಕಪ್ಪ ಚಂದ್ರಕಾಂತ ಅವರು ತನ್ನ ಸಂಬಂಧಿ ಮಲ್ಲೇಶಪ್ಪ ಅವರ ಮನೆಗೆ ಬಂದು ಹೋಗುತ್ತಿದ್ದುದ್ದರಿಂದ ದೇವಪ್ಪ ಮಲ್ಲೇಶಪ್ಪನ ಮೇಲೆ ಕೋಪಗೊಂಡು ಜಗಳ ತೆಗೆದಿದ್ದ. ಆಗ ಅಲ್ಲೇ ಇದ್ದ ಮಲ್ಲೇಶಪ್ಪನ ಸಂಬಂಧಿಕರಾದ ಶಿವಲಿಂಗಪ್ಪ ಪೊಲೀಸ್ ಪಾಟೀಲ ಮತ್ತು ಸಂಗಣ್ಣ ಪೊಲೀಸ್ ಪಾಟೀಲ ಮಲ್ಲೇಶಪ್ಪನ ಪರ ವಹಿಸಿಕೊಂಡು ದೇವಪ್ಪನಿಗೆ ಬುದ್ಧಿಮಾತು ಹೇಳಿ ಹೊಡೆ-ಬಡೆ ಮಾಡಿದ್ದರು.
ಇದರಿಂದ ಕೋಪಗೊಂಡ ದೇವಪ್ಪ ಶಿವಲಿಂಗಪ್ಪ ಮತ್ತು ಸಂಗಣ್ಣ ಅವರ ಕೊಲೆ ಮಾಡಲು ಸಂಚು ರೂಪಿಸಿದ್ದ. 20.3.2021 ರಂದು ದೇವಪ್ಪ ಬಿರಾದಾರ ಮತ್ತು ಮಲ್ಲಿಕಾರ್ಜುನ ಹಡಪದ ಸೇರಿ ಸಂಗಣ್ಣ ಪೊಲೀಸ್ ಪಾಟೀಲ ಕೊಲೆ ಮಾಡಿದ್ದರು. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಎಂ.ಶಿವಪ್ರಸಾದ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದಲ್ಲಿ 25 ಸಾವಿರ ರೂ.ಮೃತನ ಪತ್ನಿಗೆ ಪರಿಹಾರವಾಗಿ ನೀಡಲು ಸೂಚಿಸಿದ್ದಾರೆ. ಅಲ್ಲದೆ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.
ಸರ್ಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕರಾದ ಗುರುಲಿಂಗಪ್ಪ ತೇಲಿ ವಾದ ಮಂಡಿಸಿದ್ದರು.