ಕೊಲೆ ಆರೋಪಿಗಳಾದ ಸೈಯದ್ ಅಲಿ, ಶೇಖ್ ಅಮನ್ ಬಂಧನ

ಕುಡಿವ ನೀರು ಕ್ಷುಲ್ಲಕ ಕಾರಣ : ಕಾಂಗ್ರೆಸ್ ಮುಖಂಡ ಮಹಿಬೂಬ್‌ನ ಹಾಡು ಹಗಲೆ ಭೀಕರ ಕೊಲೆ
ರಾಯಚೂರು.ಜು.೨೨- ಕುಡಿವ ನೀರಿಗೆ ಸಂಬಂಧಿಸಿ ಉದ್ಭವಿಸಿದ ಕ್ಷುಲ್ಲಕ ಜಗಳದ ಕಾರಣದ ದ್ವೇಷದಿಂದ ನಿನ್ನೆ ಸಂಜೆ ಹಾಡು ಹಗಲೆ ಬಿಎಸ್‌ಎನ್‌ಎಲ್ ಆಫೀಸ್ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಗುತ್ತೇದಾರನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ವಾರ್ಡ್ ೧೨ ರಲ್ಲಿ ನಿವಾಸಿ ಮಹಿಬೂಬ್ ಅಲಿ (೪೫) ಎನ್ನುವ ಗುತ್ತೇದಾರನನ್ನು ಸೈಯದ್ ಅಲಿ (೨೨) ಹಾಗೂ ಶೇಖ್ ಅಮನ್ (೨೦) ಎನ್ನುವ ಆರೋಪಿಗಳು ಮಚ್ಚಿನಿಂದ ಹೊಡೆದು ನಂತರ ತಲೆಗೆ ಕಲ್ಲು ಎತ್ತಿ ಎಸೆದು, ಕೊಲೆ ಮಾಡಲಾಗಿದೆ. ಬಿಎಸ್‌ಎನ್‌ಎಲ್ ಕಛೇರಿ ಹಾಗೂ ಸರ್ಕಾರಿ ಬಾಲಕರ ಕಾಲೇಜು ಬಳಿ ಸಾಯಂಕಾಲ ೪ ಘಂಟೆಗೆ ದಾರುಣವಾಗಿ ಕೊಲೆ ಮಾಡಲಾಗಿದೆ. ಮಹಿಬೂಬ್ ಅಲಿಯ ಮಕ್ಕಳು ಸಾಫಿಯಾ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು. ಇವರನ್ನು ಕರೆದುಕೊಂಡು ಹೋಗಲು ಬಂದಾಗ ಈ ದುರ್ಘಟನೆ ನಡೆದಿದೆ.
ಇತ್ತೀಚಿಗಷ್ಟೆ ವಾರ್ಡ್ ೧೨ ರಲ್ಲಿ ಕುಡಿವ ನೀರಿಗೆ ಸಂಬಂಧಿಸಿ ಮಹಿಬೂಬ್ ಅಲಿ ಮತ್ತು ಕೊಲೆ ಆರೋಪಿಗಳಾದ ಸೈಯದ್ ಅಲಿ ಹಾಗೂ ಶೇಖ್ ಅಮನ್ ಅವರ ಮಧ್ಯೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಮಹಿಬೂಬ್ ಅಲಿ ಯುವಕರಿಗೆ ಬುದ್ಧಿವಾದ ಹೇಳಲು ಹೊಡೆದಿದ್ದನು ಎಂದು ಹೇಳಲಾಗಿದೆ. ಇದೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಹೊಂಚು ಹಾಕಿ ನಿನ್ನೆ ಸಂಜೆ ಮಚ್ಚಿನಿಂದ ಕುತ್ತಿಗೆಗೆ ಹೊಡೆದು, ನಂತರ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ನಡೆದಿದೆ. ಶಾಲೆ ಬಿಟ್ಟ ಸಮಯದಲ್ಲಿ ಅನೇಕರು ಓಡಾಡುತ್ತಿರುವ ಸಂದರ್ಭದಲ್ಲಿಯೆ ಈ ಭೀಕರ ಕೊಲೆ ನಡೆದಿರುವುದು ಜನ ತೀವ್ರ ಭಯಭೀತಗೊಳ್ಳುವಂತೆ ಮಾಡಿತ್ತು.
ಕೆಲ ಕ್ಷಣ ಈ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊಲೆಯಾಗುತ್ತಿದ್ದಂತೆ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಸದಾರ್ ಬಜಾರ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ತಕ್ಷಣವೇ ಶವವನ್ನು ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸೈಯದ್ ಅಲಿ ಮತ್ತು ಶೇಖ್ ಅಮನ್‌ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.