ಕೊಲೆಯಾದ ಯುವತಿ ಕುಟುಂಬಕ್ಕೆ ಕೂಡ್ಲಿಗಿ ಶಾಸಕರಿಂದ 1 ಲಕ್ಷ ರೂ. ವೈಯಕ್ತಿಕ ಪರಿಹಾರ ವಿತರಣೆ.


ಕೂಡ್ಲಿಗಿ.ಜು. 29 :-  ಇತ್ತೀಚೆಗೆ ಭೀಕರವಾಗಿ ಕೊಲೆಯಾಗಿದ್ದ ತಾಲೂಕಿನ ಕನ್ನಿಬೋರಯ್ಯನಹಟ್ಟಿ ಗ್ರಾಮದ ಯುವತಿ ನಿರ್ಮಲಾ ಕುಟುಂಬಕ್ಕೆ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಂದ 1 ಲಕ್ಷ ರೂ. ವೈಯಕ್ತಿಕ ಪರಿಹಾರವನ್ನು   ಶಾಸಕರ ಆಪ್ತಸಹಾಯಕ ಶ್ರೀಕಾಂತ್ ಹಾಗೂ ಬಿಜೆಪಿ  ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ ಸೇರಿದಂತೆ ಇತರರು ಸೇರಿ  ಯುವತಿಯ ನೊಂದ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿಯಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಕನ್ನಿಬೋರಯ್ಯನಹಟ್ಟಿಗೆ ತೆರಳಿ  ಯುವತಿಯ ತಂದೆ ಚೇರ್ಮನ್ ಬಸಣ್ಣ ಹಾಗೂ ತಾಯಿ ಓಬಮ್ಮ ಅವರಿಗೆ ಶಾಸಕರ ಪರವಾಗಿ 1 ಲಕ್ಷ ರೂ.ಯನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ನೇತೃತ್ವದಲ್ಲಿ ನೀಡಲಾಯಿತು. ಅದರಂತೆ, ಬಿಜೆಪಿ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗ ಸೂರ್ಯಪಾಪಣ್ಣ ಅವರು ವೈಯಕ್ತಿಕವಾಗಿ 10 ಸಾವಿರ ರೂ.ಯನ್ನು ಕೊಲೆಯಾಗಿರುವ ಯುವತಿಯ ತಂದೆ, ತಾಯಿಗೆ ಇದೇ ಸಂದರ್ಭದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿದ್ದ ನಿರ್ಮಲಾ ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದ ಪ್ರತಿಭಾವಂತ ಯುವತಿಯಾಗಿದ್ದು, ಅವರನ್ನು ಭೀಕರವಾಗಿ ಕೊಲೆ ಮಾಡಿರುವುದು ಖಂಡನೀಯ. ಕೃತ್ಯ ಎಸಗಿರುವ ಆರೋಪಿಗೆ ಕಾನೂನಿನ ರೀತಿ ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕು. ಅಲ್ಲದೆ, ಇಂಥ ಅಮಾನವೀಯ ಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಾನೂನಿನ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೊಲೆಯಾದ ಯುವತಿ ನಿರ್ಮಲಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಕೊಲೆ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಯಾಗಿಸುವಂತೆ ಒತ್ತಾಯಿಸಿ ವಿಜಯನಗರ ಎಸ್.ಪಿಗೆ ಬರೆದ ಮನವಿ ಪತ್ರವನ್ನು ಕಾನಹೊಸಹಳ್ಳಿ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ನಾಗರತ್ನಮ್ಮ ಅವರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಸೂರ್ಯಪಾಪಣ್ಣ, ಚಂದ್ರಮೌಳಿ, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್,  ಪೂಜಾರಹಳ್ಳಿ ಗ್ರಾಪಂ ಅಧ್ಯಕ್ಷೆ ಜಿ.ಶಿಲ್ಪಾ ಬಸಪ್ಪ, ಸದಸ್ಯರಾದ ನಾಗೇಶ್, ವೆಂಕಟೇಶ್, ಮುಖಂಡರಾದ ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಟಿ.ಜಿ.ಮಲ್ಲಿಕಾರ್ಜುನಗೌಡ, ಹುಡೇಂ ಪಾಪನಾಯಕ, ಪಿ.ಮಂಜುನಾಥ, ಕೆಂಗಣ್ಣ, ಕುಲುಮೆಹಟ್ಟಿ ವೆಂಕಟೇಶ್, ಮಂಜಣ್ಣ, ಕುರಿಹಟ್ಟಿ ರಾಮಣ್ಣ, ಸೂಲದಹಳ್ಳಿ ಸಿದ್ದಪ್ಪ, ಶರಣಪ್ಪ, ಹನುಮಜ್ಜರ ನಾಗೇಶ್, ಎನ್‌.ಕೆ.ನಾಗೇಂದ್ರಪ್ಪ, ಕಿಟ್ಟಪ್ಪರ ವೀರೇಶ್, ಕೆ.ಎಸ್.ವಿಶ್ವನಾಥ, ಅಮಲಾಪುರ ಅಂಜಿನಪ್ಪ, ಕೆ.ಬಿ.ಹಟ್ಟಿ ಪರಮೇಶ್, ಮಂಜುನಾಥ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಚಂದ್ರು, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್, ಪಾಲಯ್ಯನಕೋಟೆ ಕಲ್ಲೇಶ್, ಪೂಜಾರಹಳ್ಳಿ ತಾಂಡಾ ವಿಜಯ್ ಸೇರಿ ಇತರೆ  ಕಾರ್ಯಕರ್ತರು ಇದ್ದರು.

Attachments area