ಕೊಲೆಗೈದು ಶವ ಸುಟ್ಟ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು,ಏ.೧೪- ರೈಟರ್ ಆಗಿದ್ದ ಸಹೋದ್ಯೋಗಿಯನ್ನು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿ ಆತನ ಕಾರನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ತಲ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ತಲಘಟ್ಟಪುರದ ಮಲ್ಲಸಂದ್ರದ ನಾಗರಾಜು ವೆಂಕಣ್ಣ ಗಾಣಿಗಾರ್ (೨೯), ಕೆಂಗೇರಿಯ ಮಂಜು (೨೫), ಬಸವನ ಬಾಗೇವಾಡಿಯ ಅರುಣ್ ರಾಥೋಡ್ (೨೬), ಅಯ್ಯಣ್ಣ ರೆಡ್ಡಿ ಲೇಔಟ್‌ನ ಪರಶುರಾಮ ಅಲಿಯಾಸ್ ರಾಮ (೨೩) ಬಂಧಿತ ಆರೋಪಿಗಳಾಗಿದ್ದಾರೆ.
ಅರಣ್ಯ ರಕ್ಷಕ ಸಲೀಂ ಅಜೀಂಸಾಬ್ ಶೇಖ್ ಕಿರುಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಮಾ. ೨೮ ರಂದು ಅರಣ್ಯದ ದನದ ಗೇಟ್ ಬಳಿ ಕೊಳೆತ ಸ್ಥಿತಿಯಲ್ಲಿದ್ದ ೪೦ ವರ್ಷ ವಯಸ್ಸಿನ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತಲಘಟ್ಟ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದರಾಜು ತನಿಖೆ ಕೈಗೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ಪಾಂಡೆ ಅವರು ಕೃತ್ಯದ ಪತ್ತೆಗೆ ಕೆಎಸ್ ಲೇಔಟ್ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರನ್ನೊಳಗೊಂಡ ೨ ವಿಶೇಷ ತಂಡವನ್ನು ಕೃತ್ಯದ ಪತ್ತೆಗೆ ರಚಿಸಿದ್ದರು.
ತಂಡವು ಕಾರ್ಯಾಚರಣೆ ಕೈಗೊಂಡು ಮೃತದೇಹದ ಪತ್ತೆ ನಡೆಸಿದಾಗ ತಲಘಟ್ಟಪುರದ ಶಶಿಕುಮಾರ್ ಅವರ ಬಳಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಅಗರಿ ಬೊಮ್ಮನಹಳ್ಳಿ ಮೂಲದ ತಿಪ್ಪಸಂದ್ರದ ಅಮೀತ್ ಕುಮಾರ್ (೩೩) ಎನ್ನವರು ಕೊಲೆಯಾಗಿರುವುದು ಪತ್ತೆಯಾಗಿವೆ. ತನಿಖೆ ವೇಳೆ ಕೊಲೆಯಾದ ಅಮೀತ್ ಕುಮಾರ್ ಕೆಲಸ ಮಾಡುತ್ತಿದ್ದ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ತಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ವರ್ತಿಸಿ ಪೊಲೀಸರ ಬಳಿ ಸತ್ಯ ಮರೆಮಾಚಿದರು.
ಆದರೂ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡು ಮೃತನ ಮೊಬೈಲ್ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಿ ಸತ್ಯ ಮರೆಮಾಚಿದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆಯಾದ ಅಮೀತ್‌ಕುಮಾರ್ ಅವರ ಮಾಲೀಕ ಶಶಿಕುಮಾರ್‌ಗೆ ಸೇರಿದ ಮಲ್ಲಸಂದ್ರದ ಜಮೀನಿನ್ನಲ್ಲಿ ೪ ಶೆಡ್‌ಗಳನ್ನು ನಿರ್ಮಿಸಿದ್ದು, ಅದರಲ್ಲಿ ಒಂದು ಶೆಡ್‌ನ್ನು ಆರೋಪಿ ನಾಗರಾಜ್ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕನಿಗೆ ಉಳಿದುಕೊಳ್ಳಲು ನೀಡಲಾಗಿತ್ತು. ಇನ್ನುಳಿದ ೩ ಶೆಡ್‌ಗಳಲ್ಲಿ ಒಂದನ್ನು ಇಟಾಚಿ ಟಿಪ್ಪರ್‌ಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಸ್ಟೋರ್ ರೂಂ ಹಾಗೂ ಅದರ ಪಕ್ಕದ ಶೆಡ್‌ನ್ನು ಕಚೇರಿಗೆ, ಇನ್ನೊಂದನ್ನು ಕೊಲೆಯಾದ ಶಶಿಕುಮಾರ್ ವಾಸಕ್ಕೆ ನೀಡಲಾಗಿತ್ತು.
ಆರೋಪಿ ನಾಗರಾಜ್ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಅಮೀತ್‌ಕುಮಾರ್ ಬಳಿ ಹೆಚ್ಚಿನ ಹಣ ಇರುವುದನ್ನು ಗಮನಿಸಿ ಉಳಿದ ಆರೋಪಿಗಳ ಜತೆ ಸಂಚು ರೂಪಿಸಿ ಕೊಲೆಗೈದು ಆತನ ಕರ್ತವ್ಯವನ್ನು ತಾನೇ ವಹಿಸಿಕೊಳ್ಳುವ ದುರಾಲೋಚನೆ ಹೊಂದಿದ್ದರು.
ಕಳೆದ ಮಾ.೨೮ ರಂದು ಅಮೀತ್‌ಕುಮಾರ್‌ಗೆ ಮಚ್ಚಿನಿಂದ ಹೊಡೆದಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಡೀಸಲ್ ಕ್ಯಾನನ್ನು ತೆಗೆದುಕೊಂಡು ಆತನ ಬಳಿಯಿದ್ದ ಚಿನ್ನಾಭರಣ, ಮೊಬೈಲ್‌ನ್ನು ದೋಚಿ ಕಾರಿನಲ್ಲಿ ಮೃತದೇಹವನ್ನು ಹಾಕಿಕೊಂಡು ಸುರಳ್ಳಿಯ ದನದ ಗೇಟ್ ಬಳಿ ಮೃತ ದೇಹವನ್ನು ಚರಂಡಿಗೆ ಹಾಕಿ ಡೀಸಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಕಾರನ್ನು ನಂಬರ್ ಪ್ಲೇಟ್ ಬದಲಿಸಿ ಗೋವಾದಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು. ಆರೋಪಿಗಳನ್ನು ಬಂಧಿಸಿ ಕಾರು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್‌ಪಾಂಡೆ ತಿಳಿಸಿದರು.