ಕೊಲೆಗಳ ಅಂಗಳ ಕರಾವಳಿ

ಮಂಗಳೂರು, ಜು. ೨೯- ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್‌ನ ಕೊಲೆಯಿಂದ ಹರಿದ ನೆತ್ತರ ಆರುವ ಮುನ್ನವೇ ಸುರತ್ಕಲ್‌ನಲ್ಲಿ ಫಾಜಿಲ್ ಎಂಬ ಯುವಕನ ಭೀಕರ ಹತ್ಯೆ ನಡೆದಿರುವುದು ಕರಾವಳಿಯಲ್ಲಿನ ಪರಿಸ್ಥಿತಿ ನಿಗಿ ನಿಗಿ ಕೆಂಡದಂತಿದ್ದು ಇಡೀ ಕರ್ನಾಟಕ ಬೆಚ್ಚಿ ಬೀಳುವಂತಾಗಿದೆ.
ಪ್ರವೀಣ್ ಹತ್ಯೆ ಸಂಬಂಧ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಂತೆಯೇ ಸುರತ್ಕಲ್‌ನಲ್ಲಿ ರಕ್ತದ ಕೋಡಿ ಹರಿದಿದೆ.
ಫಾಜಿಲ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ೧೨ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.ನಗರ ಹಾಗೂ ಹೊರವಲಯದಲ್ಲಿ ಜನ ಗುಂಪು ಸೇರುವುದು ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದ್ದು ಧಾರ್ಮಿಕ ಕೇಂದ್ರಗಳ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಗಸ್ತು ಹೆಚ್ಚಳ ಮಾಡಲಾಗಿದೆ.
ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯವನ್ನು ಸಂಪರ್ಕಿಸುವ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿದೆ. ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಂಡು ಭದ್ರತೆಯನ್ನು ಹೆಚ್ಚಿಸಲಾಗಿದೆ.

೧೨ ಮಂದಿ ವಶ:
ಫಾಜಿಲ್ ಕೊಲೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳನ್ನಾಧರಿಸಿ ೧೨ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ಪರಿಸ್ಥಿತಿ ಶಾಂತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.ಈ ಮಧ್ಯೆ ನಗರದಲ್ಲಿ ಜಾರಿಗೊಳಿಸಿರುವ ನಿಷೇಧಾಜ್ಞೆ ಉಲ್ಲಂಘಿಸಿದ ೧೪ ಜನರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗಿದೆ. ಕೊಲೆಯಾದ ಫಾಜಿಲ್ ಅಂತ್ಯಕ್ರಿಯೆ ವೇಳೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದರು.
ಜು.೩೧ರವರೆಗೆ ನಿಷೇಧಾಜ್ಞೆ :
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜು.೩೧ರ ಬೆಳಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು ಜನ ಗುಂಪು ಸೇರಿದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು.ನಗರದ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಪಣಂಬೂರು, ಮುಲ್ಕಿ, ಬಜಪೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯವನ್ನು ಸಂಪರ್ಕಿಸುವ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ನಿನ್ನೆ ರಾತ್ರಿ ೧೦ ಗಂಟೆಯಿಂದ ಅನಾವಶ್ಯಕವಾಗಿ ರಸ್ತೆಗೆ ಇಳಿದರೆ ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ. ವಾಹನವನ್ನು ಜಪ್ತಿ ಮಾಡಲಾಗುವುದು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜನರು ಈ ಆದೇಶವನ್ನು ಪಾಲಿಸಬೇಕು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.

ಮತ್ತೊಂದು ಕೊಲೆ:
ದಕ್ಷಿಣ ಕನ್ನಡದಲ್ಲಿ ಕಳೆದ ೧೦ ದಿನಗಳಲ್ಲಿ ಒಟ್ಟು ಮೂವರ ಬರ್ಬರ ಹತ್ಯೆ ನಡೆದಿದೆ. ಮಂಗಳೂರಿನ ಹೊರವಲಯದ ಸುರತ್ಕಲ್‌ನಲ್ಲಿ ನಿನ್ನೆ ರಾತ್ರಿ ಫಾಜಿಲ್‌ನನ್ನು ನಾಲ್ವರು ದುಷ್ಕರ್ಮಿಗಳು ಹತ್ಯೆಗೈಯ್ದಿದ್ದಾರೆ. ಹೊಂಚು ಹಾಕಿ ಕಾದು ಕುಳಿತು ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.ಗಾಯಾಳು ಫಾಜಿಲ್‌ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಡೆಲವರಿ ಬಾಯ್:
ಹಲವು ವರ್ಷಗಳಿಂದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಫಾಜಿಲ್ ಸದ್ಯ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ೮ ಗಂಟೆ ಸುಮಾರಿಗೆ ಬಟ್ಟೆ ಅಂಗಡಿ ಬಳಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.ಫಾಜಿಲ್ ಹತ್ಯೆ ಬಳಿಕ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್ ಗಸ್ತು ಹೆಚ್ಚಳಕ್ಕೆ ಸೂಚಿಸಲಾಗಿದೆ. ಹೊಯ್ಸಳ, ಚೀತಾ ವಾಹನ ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು, ಕೆ.ಎಸ್.ಆರ್ಪಿ ತುಕಡಿ ನಿಯೋಜನೆಗೂ ಸೂಚಿಸಲಾಗಿದೆ.