ಕೊಲೆಗಡುಕರ ಕಾನೂನು ವಿರುದ್ಧ ಬೃಹತ್ ಪ್ರತಿಭಟನೆ

ರಾಯಚೂರು, ಜ.೧೭-ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗುವ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಕಾನೂನು ವಿರೋಧಿಸಿ ಲಾರಿ ಚಾಲಕರು ಮತ್ತು ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಲಾರಿ ಚಾಲಕರು ಮತ್ತು ಪ್ರಗತಿಪರ ಸಂಘಟನೆಗಳು ನಗರದ ಕರ್ನಾಟಕ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಬೃಹತ್ ಪ್ರತಿಭಟನೆ ರ್‍ಯಾಲಿ ನಡೆಸಿದರು. ಬೃಹತ್ ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಮಿಯಾಸಿದ ಪರಿಣಾಮ ಜಿಲ್ಲಾಧಿಕಾರಿ ಕಚೇರಿ ಸಂಪೂರ್ಣ ಬಂದ್ ಮಾಡಲಾಯಿತು.
ನಗರದಲ್ಲಿ ಆಟೋ, ಜಿಪ್ ಸಾರ್ವಜನಿಕ ವಾಹನಗಳು ಸಂಪೂರ್ಣ ಬಂದ್ ಮಾಡಲಾಯಿತು.
ರಸ್ತೆ ಉದ್ದಕ್ಕೂ ಕೇಂದ್ರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರಕಾರ ಕೂಡಲೇ ಕೊಲೆಗಡುಕರ ಕಾನೂನು ಹಿಂಪಡಿಯಬೇಕೆಂದು ಪ್ರಧಾನಿಗೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅವೈಜ್ಞಾನಿಕವಾದ ಕಾನೂನು ಜಾರಿಗೆ ತರಲು ಹೊರಟಿದೆ. ಸಂಸತ್ತಿನಲ್ಲಿ ಒಪ್ಪಿಗೆ ಪಡೆದು, ರಾಷ್ಟ್ರಪತಿಯವರ ಅಂಕಿತಕ್ಕೆ ಕಳಿಸಲಾಗಿದೆ. ಚಾಲಕನಿಂದ ಅಪಘಾತ ಸಂಭವಿಸಿದರೆ ಗಾಯಗೊಂಡ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವಂತಿಲ್ಲ. ಖುದ್ದು ಸ್ಥಳದಲ್ಲಿದ್ದು ಆಸ್ಪತ್ರೆಗೆ ಸಾಗಿಸಬೇಕು. ಮಹಜರು ಮಾಡುವಾಗ ಚಾಲಕ ಸ್ಥಳದಲ್ಲಿರಬೇಕು. ಇಲ್ಲವಾದಲ್ಲಿ ಚಾಲಕನಿಗೆ ೧೦ ವರ್ಷ ಜೈಲು ಶಿಕ್ಷೆ.೧೦ ಲಕ್ಷ ದಂಡ ಹಾಕಲಾಗುತ್ತದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಚಾಲಕನಿದ್ದರೆ ಗಾಯಗೊಂಡ ವ್ಯಕ್ತಿಯ ಸಂಬಂಧಿಕರು, ಸಾರ್ವಜನಿಕರು ದಾಳಿ ನಡೆಸಬಹುದು. ಈ ರೀತಿಯ ಘಟನೆಗಳಲ್ಲಿ ಎಷ್ಟೋ ಚಾಲಕರು ಜೀವ ಕಳೆದುಕೊಂಡಿದ್ದಾರೆ ಎಂದು ಮನವಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ತರಲಿರುವ ಹೊಸ ಕಾಯ್ದೆ ಚಾಲಕರಿಗೆ ವಿರುದ್ಧವಾದುದು. ಕೊಲೆಗಡುಕರಿಗೆ ವಿಧಿಸುವಂತಹ ಕಾನೂನು ಚಾಲಕರಿಗೆ ವಿಧಿಸಲು ಹೊರಟಿದೆ. ಇದರ ವಿರುದ್ಧ ಈಗಾಗಲೇ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಸಾವಿರಾರು ಚಾಲಕರು ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು. ಚಾಲಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಾರಿಗೆ ಮುಂದಾದರೆ ರಾಜ್ಯದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲಾರಿ ಚಾಲಕರು ಮತ್ತು ಕನ್ನಡ ಪರ ಹಾಗೂ ಪ್ರಗತಿಪರ ಸಂಘಟನೆ ಮುಖಂಡರು ಇದ್ದರು.