ಕೊರೋನ ನಿಗ್ರಹಕ್ಕೆ ಲಾಕ್‌ಡೌನ್ ಮದ್ದಲ್ಲ: ಶಾಸಕ ಯು.ಟಿ ಖಾದರ್


ಮಂಗಳೂರು, ಎ.೨೪- ಕೊರೋನ ೨ನೆ ಅಲೆಯ ಬಗ್ಗೆ ತಜ್ಞರು ವರದಿ ನೀಡಿದ್ದರೂ ಕೂಡ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಪದವಿನಂಗಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕೊರೋನ ಸೋಂಕು ಕಾಣಿಸಿಕೊಂಡಾಗ ಅದರ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ. ಆದಾಗ್ಯೂ ಎಲ್ಲರೂ ಮುನ್ನೆಚ್ಚರಿಕೆ ವಹಿಸಿದ್ದರು. ಈ ಮಧ್ಯೆ ಕೊರೋನ ೨ನೆ ಅಲೆ ಅಪ್ಪಳಿಸಲಿದೆ ಎಂದು ತಜ್ಞ ವೈದ್ಯರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರು. ಆದರೆ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಕೆಲವು ದಿನಗಳವರೆಗೂ ಸರಕಾರ ಲಾಕ್‌ಡೌನ್ ಮಾಡುವುದಿಲ್ಲ, ಕರ್ಫ್ಯೂ ವಿಧಿಸುವುದಿಲ್ಲ ಎಂದಿತ್ತು. ಆದರೆ ದಿಢೀರ್ ಆಗಿ ಲಾಕ್‌ಡೌನ್ ಹೇರಿದೆ, ಕರ್ಫ್ಯೂ ವಿಧಿಸಿದೆ. ಇದು ಸರಕಾರದ ವೈಫಲ್ಯವನ್ನು ಮರೆಮಾಚಲು ಮಾಡಿದ ತಂತ್ರಗಾರಿಕೆ ಎಂದರು. ಕೊರೋನ ನಿಗ್ರಹಕ್ಕೆ ಲಾಕ್‌ಡೌನ್ ಮದ್ದಲ್ಲ, ಪರಿಹಾರವೂ ಅಲ್ಲ. ಲಾಕ್‌ಡೌನ್, ಕರ್ಫ್ಯೂ ಬಗ್ಗೆ ಜನರು ಆತಂಕದಲ್ಲಿದ್ದಾರೆ. ದಿನಕ್ಕೊಂದು ಆದೇಶ ಹೊರಡಿಸುವುದರಿಂದ ಜನರು ಕೂಡ ಗೊಂದಲದಲ್ಲಿದ್ದಾರೆ. ಅಲ್ಲದೆ ಲಾಕ್‌ಡೌನ್ ವಿಧಿಸಿ ಭಯದ ವಾತಾವರಣ ಸೃಷ್ಟಿಸಿದೆ. ಸರಕಾರದ ಕೊರೋನ ನಿಗ್ರಹದ ಬದಲು ಉಪಚುನಾವಣೆಯತ್ತ ಹೆಚ್ಚು ಗಮನ ಹರಿಸಿತ್ತು. ಅದರ ಪರಿಣಾಮವನ್ನು ರಾಜ್ಯದ ಜನತೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.