ಕೊರೋನ ಜೊತೆಗೆ ಮೂಢ ನಂಬಿಕೆಗಳ ತೊಲಗಿಸಬೇಕು”

ಚಿತ್ರದುರ್ಗ. ಜೂ.೩; ಕೊರೋನ ಗ್ರಾಮಗಳಲ್ಲಿ ಹೆಚ್ಚಾಗುತ್ತಲಿದ್ದು, ಜನರು ವೈದ್ಯಕೀಯ ನೆರವನ್ನ ಪಡೆಯುವ ಬದಲು ಮೂಢನಂಬಿಕೆಗಳನ್ನ ಅಳವಡಿಸಿಕೊಂಡು, ಗೊಂಬೆಗಳನ್ನ ಪೂಜೆ ಮಾಡುವುದು, ನಿಂಬೆಹಣ್ಣಿನ ಪೂಜೆ ಮಾಡುವುದು, ನಿಂಬೆಹಣ್ಣಿಗೆ ಮುಳ್ಳು ಚುಚ್ಚುವುದು, ಕಲ್ಲುಗಳಿಗೆ ನೀರು ಹಾಕುವುದು, ಕೋಳಿಗಳನ್ನ ಬಲಿಕೊಡುವುದು, ಬೇಯಿಸಿದ ಅನ್ನವನ್ನು ಊರ ಸುತ್ತಮುತ್ತ ಹಾಕುವುದು, ಇನ್ನೂ ಇತರ ನಾನಾ ತರಹದ ಮೂಢನಂಬಿಕೆಗಳು ಹುಟ್ಟುಹಾಕುತ್ತಿದ್ದು, ಜನರು ಗುಂಪು ಸೇರಿ ಕರೋನ ಹರಡಲು ಸಹಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಚಳ್ಳಕೆರೆ ವೃತ್ತದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿತ್ರ ಡಾನ್ ಬಾಸ್ಕೋ ಸಹಯೋಗದೊಂದಿಗೆ ಆಯೋಜಿಸಿದ್ದ “ಕರೋನ ಜೊತೆಗೆ ಮೂಢ ನಂಬಿಕೆಗಳನ್ನು ತೊಲಗಿಸಬೇಕು” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮಗಳಲ್ಲಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಮರೆತು, ಜನ ಗುಂಪುಗೂಡಿ, ಹಳ್ಳಿಗಳಲ್ಲಿ ಹಬ್ಬದ ರೀತಿಯ ವಾತಾವರಣ ನಿರ್ಮಿಸುತ್ತಿರುವುದರಿಂದ, ಇನ್ನೂ ಕರೋನ ಹದ್ದುಬಸ್ತಿಗೆ ಬರುತ್ತಿಲ್ಲ, Pರೋನ ಜೊತೆಗೆ ನಾವು ಮೂಢನಂಬಿಕೆಯನ್ನು ಸಹ ನಿಗ್ರಹ ಮಾಡುವ ಸಮಯ ಇದಾಗಿದೆ. ಪ್ರತಿಯೊಬ್ಬರು ಸಹ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು, ಮಣ್ಣಿನ ಗೊಂಬೆಗಳನ್ನು ಮಾಡಿ, ಅವುಗಳಿಗೆ ಪೂಜೆ ಮಾಡಿ, ನಿಂಬೆ ಹಣ್ಣು, ಹೂವು, ಬೇವಿನ ಸೊಪ್ಪಿನಿಂದ ಸಿಂಗಾರ ಮಾಡಿ, ಅವುಗಳಿಗೆ ಕುರಿ, ಕೋಳಿ ಬಲಿ ಕೊಡುವುದು ಮುಂತಾದ ಮೂಢನಂಬಿಕೆಯ ಕಾರ್ಯಗಳನ್ನ ಎಸಗುತ್ತಿರುವುದು, ಕಾರಣ ಕೇಳಿದರೆ 60 ವರ್ಷದ ಹಿಂದೆ ಇಂತಹ ಖಾಯಿಲೆಗಳು ಬಂದಾಗ ಹಿರಿಯರು ಇಂತಹ ಪೂಜೆ ಮಾಡುತ್ತಿದ್ದರು, ಎಂದು ಹಳೆಯ ಮಾರ್ಗಗಳನ್ನೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅವರ ಬಳಿ ಹೋಗಿ ಅವರ ಮನಸ್ಸನ್ನ ಪರಿವರ್ತಿಸುವ ಕೆಲಸವಾಗಬೇಕು. ವಿಜ್ಞಾನದ ಜ್ಞಾನ ಅವರ ಮನೆ ಬಾಗಿಲಿಗೆ ತಲುಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವಿವಿಧ ಮಾದರಿಯ ಗೊಂಬೆಗಳನ್ನಿಟ್ಟು, ಅವುಗಳಿಗೆ ಹೂವು, ನಿಂಬೆಹಣ್ಣು, ಬೇವಿನ ಸೊಪ್ಪಿ ಹಾರ ಹಾಕಿ, ಬಿತ್ತಿ ಪತ್ರಗಳನ್ನ ಪ್ರದರ್ಶಿಸಿ, ಗಾಯನಗಳ ಮುಖಾಂತರ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಹೆಚ್. ಎಸ್. ಪ್ರೇರಣ, ಕರೋನ ಗೀತೆಗಳನ್ನ ಹಾಡಿ ಜನರನ್ನ ಜಾಗೃತಗೊಳಿಸಿದರು. ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ಸಣ್ಣನಿಂಗಪ್ಪ, ಸೋಮಲಿಂಗಪ್ಪ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ವೀಣಾ, ತೇರೆಸಾ. ರಾಘು. ಉಪನ್ಯಾಸಕರಾದ ರಮೇಶ್, ಪೊಲೀಸ್ ಸಿಬ್ಬಂದಿ ಹಾಜರಿದ್ದರು.