ಕೊರೋನ ಕೇರ್ ಸೆಂಟರ್ ಆಗಿ ಬಳಸಲು ಹುಂಚ ಜೈನ ಮಠದ ಶ್ರೀಗಳ ಸಮ್ಮತಿ

ಹೊಸನಗರ.ಮೇ.೨೦; ತಾಲೂಕಿನಾದ್ಯಂತ ಕೊರೋನ ರೋಗ ವೇಗವಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಹುಂಚ ಗ್ರಾಮದ ಪ್ರಸಿದ್ದ ಜೈನ ಮಠದ ಕೆಲವು ಕಟ್ಟಡಗಳನ್ನು ಅಗತ್ಯ ಬಿದ್ದಲ್ಲಿ ಕೊವೀಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲು ಮಠದ ಶ್ರೀಗಳು ಮುಕ್ತ ಮನಸ್ಸಿನಿಂದ ಸಮ್ಮತಿಸಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಪತ್ರಕರ್ತರಿಗೆ ತಿಳಿಸಿದರು. ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬುಧವಾರ ಬೆಳಗ್ಗೆ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಸಮಾಯೋಚಿಸಿದ ಬಳಿಕ ‘ಕೊರೋನ ರೋಗ ತಡೆಗೆ ಮಠವು ಕಟ್ಟಿಬದ್ದವಾಗಿದ್ದು, ಸಕಲ ಸಹಕಾರ ನೀಡುವ ಜೊತೆಗೆ ರೋಗಗ್ರಸ್ಥರು, ಪರಿಚಾರಕರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಿಬ್ಬಂದಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸುವ ಜೊತೆಗೆ ಕ್ವಾರಂಟೈನ್‌ಗೆ ಅಗತ್ಯವಿರುವ ಕಟ್ಟಡಗಳ ಬಳಕೆಗೆ ಅವಕಾಶ ಕಲ್ಪಿಸುವುದಾಗಿ ಶ್ರೀಗಳು ತಿಳಿಸಿದ್ದಾರೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ಶ್ರೀಮಠ ಸ್ಥಳೀಯ ಆಡಳಿತದ ಜೊತೆಗೆ ಕೈಜೊಡಿಸುವ ಭರವಸೆ ನೀಡಿದೆ’ ಎಂದು ಅವರು ತಿಳಿಸಿದರು.