ಕೊರೋನಾ-19: ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ

ಬೀದರ:ನ.15: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡಿರುವ ಕೋವಿಡ್-19 ಕೊರೋನಾ ವೈರಸ್ ಜಾಗೃತಿ ಕುರಿತಂತೆ ಪ್ರಚಾರ ಕಾರ್ಯ ನಡೆಸಲಿರುವ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ವಾಹನಗಳಿಗೆ ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ನವೆಂಬರ್ 14ರಂದು ಘಮಸುಬಾಯಿ ತಾಂಡಾದಲ್ಲಿ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಸಚಿವರು, ಜನರನ್ನು ಇದುವರೆಗೂ ಕೋವಿಡ್-19 ಮಹಾಮಾರಿ ಕಾಡುತ್ತಲೇ ಇದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಮೇಲಿಂದ ಮೇಲೆ ತಿಳಿಸುತ್ತಿದ್ದರೂ ಕೆಲವು ಜನರು ಮಾಸ್ಕ ಧರಿಸುವುದಾಗಲಿ, ಸಾಮಾಜಿಕ ಅಂತರ ಪಾಲನೆ ನಿಯಮಗಳನ್ನು ರೂಢಿಸಿಕೊಳ್ಳುತ್ತಿಲ್ಲ. ಹೀಗಾಗಿ ಜನಜಾಗೃತಿ ಮೂಡಿಸುವ ವಾಹನಗಳು ಖುದ್ದು ಆಯಾ ಗ್ರಾಮಗಳಿಗೆ ತೆರಳಿ, ಜನರ ಮನೆಬಾಗಿಲ ಮುಂದೆ ನಿಂತು ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬೃಹತ್ ಎಲ್‍ಇಡಿ ಪರದೆಯ ಮೂಲಕ ಕೋವಿಡ್-19 ಜನಜಾಗೃತಿ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.
ಬೀದಿನಾಟಕಗಳ ಕಲಾ ತಂಡಗಳ ಮೂಲಕ ವಾರ್ತಾ ಇಲಾಖೆಯು ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನರು ಈಗಾಗಲೇ ನೋಡಿದ್ದಾರೆ. ಆದರೆ, ಈಗ ಕೋವಿಡ್-19 ಹಿನ್ನೆಲೆಯಲ್ಲಿ ಕಲಾವಿದರ ಆರೋಗ್ಯದ ಹಿತದೃಷ್ಟಿಯಿಂದ ಎಲ್‍ಇಡಿ ವಾಹನಗಳ ಮೂಲಕ ಕೋವಿಡ್-19ರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಬಹುಪರಿಣಾಮಕಾರಿ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿರುವ ಈ ಕೋವಿಡ್-19ರ ಜನಜಾಗೃತಿ ಕಾರ್ಯಕ್ರಮವು ಬೀದರ ಜಿಲ್ಲೆಯಲ್ಲಿ ಕೂಡ ನವೆಂಬರ್ 14ರಿಂದ ಆರಂಭಗೊಂಡಿದೆ. ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್ ಮತ್ತು ಔರಾದ್ ತಾಲೂಕಿನ ಆಯ್ದ ಹಳ್ಳಿಗಳಲ್ಲಿ ಈ ಬೃಹತ್ ಎಲ್.ಇ.ಡಿ. ಪರದೆ ಹೊಂದಿದ ಈ ವಾಹನಗಳು ಸಂಚರಿಸಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಪ್ರಚಾರ ಕಾರ್ಯ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪಿಡಿಓಗಳಿಗೆ ಸೂಚನೆ: ಈ ಎಲ್‍ಇಡಿ ಪರದೆಯ ವಾಹನವು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಈ ಕೋವಿಡ್-19 ಮುಂಜಾಗ್ರತಾ ಕ್ರಮದ ಸಂದೇಶ ತಲುಪುವ ಹಾಗೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಈ ವೇಳೆ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಕೋವಿಡ್-19ರ ಕುರಿತು ಮುಂಜಾಗ್ರತೆ ಜಾಗೃತಿ ಸಂದೇಶ ನೀಡಲು ಬಂದಿರುವ ಈ ಪ್ರಚಾರ ವಾಹನವು ಬೀದರ ಜಿಲ್ಲೆಯ ಬೀದರ, ಬಸವಕಲ್ಯಾಣ, ಔರಾದ್, ಹುಮಾನಾಬಾದ್ ಮತ್ತು ಭಾಲ್ಕಿ ತಾಲೂಕುಗಳಲ್ಲಿ ದಿನಕ್ಕೆ 5 ಗ್ರಾಮಗಳಂತೆ ಒಟ್ಟು 180 ಗ್ರಾಮಗಳಲ್ಲಿ ಸಂಚರಿಸಲಿದೆ. ಯಾವ ದಿನಗಳಂದು ಯಾವ ಗ್ರಾಮಗಳಲ್ಲಿ ವಾಹನ ಸಂಚರಿಸುತ್ತವೆ ಎಂಬುದರ ಬಗ್ಗೆ ಸುದ್ದಿ ಬಿಡುಗಡೆ ಮತ್ತು ಸಾಮಾಜಿಕ ಜಾಲತಾಣಗಳು ಮೂಲಕ ಮುಂಚಿತವಾಗಿ ಜನರಿಗೆ ತಿಳಿಸಲಾಗುವುದು. ಎಲ್‍ಇಡಿ ಪರದೆಯ ಮೂಲಕ ತೋರಿಸುವ ಕೋವಿಡ್-19ರ ಮುಂಜಾಗ್ರತಾ ಕ್ರಮಗಳು ಮತ್ತು ಸರಕ್ಷತಾ ಕ್ರಮಗಳ ವಿಡಿಯೋವನ್ನು ಜನರು ವೀಕ್ಷಿಸಿ ಅದರಂತೆ ನಡೆದುಕೊಳ್ಳಬೇಕು. ಕೋವಿಡ್-19 ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತೀ ಅವಶ್ಯವಿದೆ ಎಂದು ಸಾರ್ವಜನಿಕರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾರುತಿ ಚವ್ಹಾಣ್, ಮುಖಂಡರಾದ ಬಸವರಾಜ ಸ್ವಾಮಿ, ಚಂದ್ರಕಾಂತ ಪಾಂಚಾಳ, ಮಾರುತಿ ಗುಳೆ, ಸಂಜೀವ ಪಾಂಚಾಳ ಹಾಗೂ ಇತರರು ಇದ್ದರು.
ನವೆಂಬರ್ 14 ರಂದು ಎಲ್‍ಇಡಿ ಪರದೆಯ ವಾಹನಗಳು ಬೀದರ ತಾಲೂಕಿನ ಅಷ್ಟೂರ್, ಮಾಳೇಗಾಂವ್, ಚಿಲ್ಲರ್ಗಿ, ಚೀಮಕೋಡ್ ಮತ್ತು ಗಾದಗಿ ಗ್ರಾಮಗಳಲ್ಲಿ ಮತ್ತು ಔರಾದ್ ತಾಲೂಕಿನಲ್ಲಿ ಸಂಗಮ, ಬಳತ್(ಬಿ), ಬಳತ್ (ಕೆ), ಚಾಂದೋರಿ ಮತ್ತು ಹಾಲಹಳ್ಳಿ ಗ್ರಾಮಗಳಲ್ಲಿ ಸಂಚಾರ ನಡೆಸಿ, ಜನಜಾಗೃತಿ ಮೂಡಿಸಿದವು.