ಕೊರೋನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸಿ: ಪ್ರಭು ಚವ್ಹಾಣ

ಭಾಲ್ಕಿ:ಎ.28: ತಾಲ್ಲೂಕಿನಲ್ಲಿ ಕೋವಿಡ್ ತಡೆಗೆ ಎಲ್ಲ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಕೊರೊಣಾ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ತಡೆ ಕುರಿತು ಮಂಗಳವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲ್ಲೂಕು ಪಂಚಾಯಿತಿ ಮುಖ್ಯಸ್ಥರು ಕೋವಿಡ್ ನಿಯಂತ್ರಣಕ್ಕೆ ಹಿಂದಿನಂತೆ ಆಸಕ್ತಿ ತೋರುತ್ತಿಲ್ಲ. ಹಾಗಾಗಿ, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಾವುಗಳು ಕೂಡ ಹೆಚ್ಚಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿ ಜತೆ ಸೇರಿ ಮೊದಲಿನಂತೆ ಸಕ್ರಿಯವಾಗಿ ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ಪಿಡಿಒ, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೇರಿ ಮೂಡಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಇಓ ದೀಪಿಕಾ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿರುವ ಕುರಿತು ಸಚಿವರ
ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಿವರಾಜ ಪಾಟೀಲ ಇದ್ದರು.