ಕೊರೋನಾ ಸೋಂಕಿತರು ಸಾರ್ವಜನಿಕ ಸ್ಥಳಕ್ಕೆ ಬಾರದಂತೆ ಕಟ್ಟುನಿಟ್ಟಿನ ಕ್ರಮ

ಸುಳ್ಯ, ಎ.೨೨- ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿರುವ ಕೊರೋನಾ ಸೋಂಕಿತರು ಮತ್ತು ಅವರ ಅವಲಂಬಿತರು ಸಾರ್ವಜನಿಕ ಸ್ಥಳಗಳಿಗೆ ಬಾರದಂತೆ ನಿಗಾ ವಹಿಸಲು ಹಾಗೂ ಕಸ ಸಾಗಾಟಕ್ಕೆ ಪಂಚಾಯಿತಿಯ ಸ್ವಂತ ನಿಧಿಯಿಂದ ವಾಹನ ಖರೀದಿಸಲು ಸಂಪಾಜೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಿರ್ಧರಿಸಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಂಪಾಜೆ ಗ್ರಾಮದಲ್ಲಿ ನಡೆಯುವ ಕೋವಿಡ್ ಲಸಿಕೆ ಅಭಿಯಾನದ ಬಗ್ಗೆ ಚರ್ಚಿಸಲಾಯಿತಲ್ಲದೆ, ಗ್ರಾಮದಲ್ಲಿರುವ ಕೊರೊನ ಬಾಧಿತ ಕುಟುಂಬಗಳು ಹಾಗೂ ಅವರ ಅವಲಂಬಿತರು ಸಾರ್ವಜನಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಹೋಗದಂತೆ ಎಚ್ಚರ ವಹಿಸಲು ಹಾಗೂ ಕೊರೋನ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಲು ಎಲ್ಲಾ ಅಂಗನವಾಡಿ ,ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಹಾಯಕರಿಗೆ ಸೂಚಿಸಲಾಯಿತು. ಅವರಿಗೆ ಬೇಕಾದ ಸಾನಿಟೈಜ್ ಹಾಗೂ ಮಾಸ್ಕನ್ನು ಪಂಚಾಯಿತಿ ವತಿಯಿಂದ ಕೊಡಲು ತೀರ್ಮಾನಿಸಲಾಯಿತು. ಆರೋಗ್ಯ ಜಾಗೃತಿಯ ಬಗ್ಗೆ ಗ್ರಾಮದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಮಾಡಲು ತೀರ್ಮಾನಿಸಲಾಯಿತು. ಗ್ರಾಮದ ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚಿಸಲಾಯಿತು. ರಸ್ತೆ ಕಾಂಕ್ರೀಟಿಕರಣ, ಚರಂಡಿ ನಿರ್ಮಾಣ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚಿಸಲಾಯಿತು. ಕಸ ಸಾಗಾಟಕ್ಕೆ ಸ್ವಂತ ನಿದಿಯಲ್ಲಿ ವಾಹನ ಖರೀದಿ ಮಾಡಲು ತೀರ್ಮಾನಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೋನಾಲಿಸಾ, ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಅಬೂಸಾಲಿ ಪಿ. ಕೆ., ಹನೀಫ್ ಎಸ್. ಕೆ, ಕೆ.ಆರ್.ಜಗದೀಶ್ ರೈ, ಸುಮತಿ ಶಕ್ತಿವೇಲು, ವಿಮಲಾ ಪ್ರಸಾದ್, ರಜನಿ ಶರತ್, ಸುಂದರಿ ಮುಂಡಡ್ಕ, ಸುಶೀಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ. ಉಪಸ್ಥಿತರಿದ್ದರು.