ಕೊರೋನಾ ಸೋಂಕಿತರಿಗೆ ಸಮರ್ಪಕ ವೈದ್ಯಕೀಯ ಸೇವೆ ನೀಡುವಲ್ಲಿ ಸರ್ಕಾರ ವಿಫಲ- ಶಾಸಕ ಪ್ರಿಯಾಂಕ್ ಖರ್ಗೆ ಅಸಮಧಾನ

ಕಲಬುರಗಿ,ಮೇ.27:ಕೊರೋನಾ ಎರಡನೆಯ ಅಲೆಯನ್ನು ತಡೆಯಲು ಹಾಗೂ ಸೋಂಕಿತರಿಗೆ ಸಮರ್ಪಕ‌ ವೈದ್ಯಕೀಯ ನೆರವು ಒದಗಿಸಲು ಪೂರ್ವ ತಯಾರಿ ಮಾಡಿಕೊಳ್ಳದೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಜನರ ಜೀವ ರಕ್ಷಿಸುವ ಕೆಲಸವನ್ನು ದೇವರ ಹೆಗಲಿಗೆ ಹಾಕಿ ಅಕ್ಷರಶಃ ಜನರು ಬೀದಿ ಹೆಣವಾಗಲು ಬಿಟ್ಟಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ಸೋಂಕಿತರಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ.

ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ,‌ ಜವಾಬ್ದಾರಿಯುತ ವಿರೋಧ ಪಕ್ಷವಾದ ಕಾಂಗ್ರೆಸ್ ಕೊರೋನಾ ಸೋಂಕಿತರಿಗೆ ತನ್ನ ನೆರವಿನ‌ ಹಸ್ತ ಚಾಚುವ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.

ಸಹಾಯ ಹಸ್ತ ಹೆಸರಿನಲ್ಲಿ ಕಲಬುರಗಿ ನಗರದಲ್ಲಿ ಉಚಿತ ಅಂಬುಲೆನ್ಸ್ ಸೇವೆ ಒದಗಿಸಿರುವ ಕಾಂಗ್ರೆಸ್ ಪಕ್ಷದ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಸಾಗಿಸಿದೆ. ಇದೂವರೆಗೆ 150 ಜನರಿಗೆ ಆಸ್ಪತ್ರೆಗೆ ದಾಖಲಿಸಿ ತನ್ನ ಜವಾಬ್ದಾರಿಯನ್ನು ಪಕ್ಷ ಹಾಗೂ ಕಾರ್ಯಕರ್ತರು ಮೆರೆದಿದ್ದಾರೆ ಎಂದು ಮೆಚ್ಚುಗೆ ಸೂಸಿದ್ದಾರೆ.

” ನಾನು ಐಟಿ‌/ಬಿಟಿ ಸಚಿವನಾಗಿದ್ದಾಗ ಸಂಪರ್ಕದಲಿದ್ದ ಕಾರ್ಖಾನೆಗಳಿಗೆ ಸಂಪರ್ಕಿಸಿ ಅವರ CSR ದೇಣಿಗೆನ್ನು ನೀಡುವಂತೆ ವಿನಂತಿಸಿದ್ದೆ.‌ ಪರಿಣಾಮವಾಗಿ ಅದೇ ದೇಣಿಗೆಯನ್ನು ಬಳಸಿಕೊಂಡು ಕಲಬುರಗಿ ಜಿಲ್ಲೆಗೆ ಇದುವರೆಗೆ ಸುಮಾರು 66 ಅಮ್ಲಜನಕ ಸಾಂದ್ರಕಗನ್ನು ಒದಗಿಸಲಾಗಿದೆ. ಇನ್ನೂ 100 ಅಮ್ಲಜನಕ ಸಾಂದ್ರಕಗಳನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು. ಸದರಿ ಸಾಂದ್ರಕಗಳು ಸೌಮ್ಯದಿಂದ ಮಧ್ಯಮ ಲಕ್ಷಣಗಳಿರುವ ಕೊರೋನಾ ಸೋಂಕಿತರ ಹಾಗೂ ಉಸಿರಾಟದ ತೊಂದರೆಯಿರುವ ಮತ್ತು ಸೋಂಕಿನಿಂದ ಗುಣಮುಖವಾಗಿದ್ದರೂ ಕೂಡಾ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿವೆ. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಸಿಲೆಂಡರ್ ಕೊರೆತೆ ಇರುವ ಕಡೆ ಬಹು ಉಪಯೋಗಿಯಾಗಲಿವೆ” ಎಂದು ಶಾಸಕರು ವಿವರಿಸಿದ್ದಾರೆ.

ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ಮಂಡಳಿಯೊಂದಿಗೆ ಚರ್ಚಿಸಿ, ಅವರ CSR ದೇಣಿಗೆಯಿಂದ ಚಿತ್ತಾಪುರ ಪಟ್ಟಣದಲ್ಲಿ ಆಕ್ಷಿಜನ್ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಸುಮಾರು ರೂ. 34 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ಘಟಕ ತಾಲೂಕು ಮಟ್ಟದಲ್ಲಿಯೇ ಪ್ರಥಮ ಘಟಕವಾಗಿದ್ದು, ಜೊತೆಗೆ 25 ಬೈಪಾಸ್ ಉಪಕರಣಗಳನ್ನು‌ ಒದಗಿಸಲಾಗಿದ್ದು ಸದರಿ ಉಪಕರಣಗಳು ಮಧ್ಯಮದಿಂದ ತೀವ್ರ ಕೋವಿಡ್ ಲಕ್ಷಣ ವುಳ್ಳ ಸೋಂಕಿತರಿಗೆ ಉಸಿರಾಡಲು ಆಮ್ಲಜನಕ ಪೂರೈಸಬಹುದಾಗಿದೆ.

ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗಾಗಿ ರೂ 40 ಲಕ್ಷ ಮೌಲ್ಯದಲ್ಲಿ ಸಕಲ ಸೌಲಭ್ಯಗಳುಳ್ಳ ಅಂಬುಲೆನ್ಸ್ ಬುಕ್ ಮಾಡಿದ್ದು ಸಧ್ಯದಲ್ಲೇ ಸೇವೆಗೆ ಒದಗಲಿದೆ. ಕೋವಿಡ್ ಸೋಂಕಿನಿಂದ ಹೋಮ್ ಐಸೋಲೇಷನ್ ನಲ್ಲಿ ಇರುವವರಿಗಾಗಿ ಔಷಧಿಗಳ ಕಿಟ್ ಗಳನ್ನು ಯುವ ಕಾಂಗ್ರೆಸ್ ವತಿಯಿಂದ ವಿತರಿಸಲಾಗಿದೆ. ಜೊತೆಗೆ ಲಾಕ್ ಡೌನ್ ನಿಂದಾಗಿ ಹಸಿದವರ ಹೊಟ್ಟೆ ತುಂಬಿಸಲು ನಿತ್ಯ ಸಾವಿರಾರು ಜನರಿಗೆ ಊಟ ಒದಗಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಲಾಕ್ ಡೌನ್‌ನಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಸೇವೆ ಮಾಡುತ್ತಿರುವ ಪೊಲೀಸರ ಸುರಕ್ಷತೆಗಾಗಿ 15 PPE kit, 40 Liter ಸ್ಯಾನಿಟೈಸರ್, 30 ಮುಖ ರಕ್ಷಣಾ ಕವಚ, 02 ಥರ್ಮೋ ಮೀಟರ್, 300 ಕೈಗವಸು ಪೆಟ್ಟಿಗೆಗಳು, 400 ಸರ್ಜಿಕಲ್ ಮುಖಗವಸು ಒದಗಿಸಲಾಗಿದೆ. ಜೊತೆಗೆ ಕಲಬುರಗಿ ಸಿಟಿ ಪೊಲೀಸರಿಗಾಗಿ 800 ಮುಖಗವಸು, 300 ಮುಖ ಸಂರಕ್ಷಣಾ ಕವಚ ಮತ್ತು ವಿಮಾನ ನಿಲ್ದಾಣ ಪೊಲೀಸರಿಗಾಗಿ, 82 ಮುಖ ರಕ್ಷಣಾ ಕವಚ, 410 N 95 ಮುಖಗವಸು, ಹಾಗೂ 20 liter ಸ್ಯಾನಿಟೈಸರ್ ಕಾಂಗ್ರೆಸ್ ಪಕ್ಷ ಒದಗಿಸಲಾಗಿದೆ ಎಂದಿದ್ದಾರೆ.

ಲಸಿಕೆ ಪಡೆದುಕೊಳ್ಳಲು ಜನರೊಂದಿಗೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ಪಶುವೈದ್ಯ ಇಲಾಖೆಯ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲು ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ ನಂತರ ಎಚ್ಚೆತ್ತ ಸರ್ಕಾರ ಆದ್ಯತೆಯ ಮೇರೆಗೆ ಅವರಿಗೆ ಲಸಿಕೆ ನೀಡುವಂತೆ ಆದೇಶ ಹೊರಡಿಸಿದೆ.

ಕೊರೋನಾ ಸೋಂಕಿತರ ಜೀವ ಉಳಿಸುವಲ್ಲಿ ಕಾಂಗ್ರೆಸ್ ಪಕ್ಷ‌ ಸದಾ ಸಿದ್ದವಿದೆ ಎಂದು ಅಭಯ ನೀಡಿರುವ ಶಾಸಕರು, ಸೋಂಕಿತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ವಿನಂತಿಸಿದ್ದಾರೆ.