ಕೊರೋನಾ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಿ

ಮಂಗಳೂರು, ಮೇ ೨೯- ಕೋರೊನಾ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಿ, ಶೀಘ್ರವೇ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಅವರು ನಗರದ ಎ.ಜೆ ಆಸ್ಪತ್ರೆ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಕೋವಿಡ್ ರೋಗಿಗಳಿಗೆ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಖಾಸಗಿ ವೈಧ್ಯಕೀಯ ಶಿಕ್ಷಣ ಸಂಸ್ಥೆಯು ಶೇ ೭೫ ರಷ್ಟು ಬೆಡ್‌ಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸು ಮಾಡುವ ಕೋರೋನಾ ರೋಗಿಗಳಿಗೆ ನೀಡುವುದರೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಸೋಂಕಿತರು ಶೀಘ್ರವಾಗಿ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದರು.
ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್ ನ ಟಾಸ್ಕ್‌ಪೋರ್ಟ್‌ನಲ್ಲಿ ಪ್ರತಿದಿನದ ಮಾಹಿತಿಯನ್ನು ತಪ್ಪದೇ ಆಪ್ಲೋಡ್ ಮಾಡಬೇಕು ಎಂದರು.
ಆಯುಷ್ಮಾನ್ ಆರೋಗ್ಯ ಕರ್ನಾಟಕದ ಯೋಜನೆಯಡಿ ಚಿಕಿತ್ಸೆಗೆ ಬರುವ ಕೊರೋನಾ ರೋಗಿಗಳಿಗೆ ತಪ್ಪದೇ ಚಿಕಿತ್ಸೆ ನೀಡಬೇಕು ಇವರಿಗೆ ಸಹಕರಿಸಲು ಎರಡು ಜನ ಆರೋಗ್ಯ ಮಿತ್ರರನ್ನು ನೇಮಕ ಮಾಡಲಾಗಿದ್ದು, ಆರೋಗ್ಯಮಿತ್ರರು ಕೊರೋನಾ ಚಿಕಿತ್ಸೆಗೆ ಬರುವ ಅರ್ಹ ಆಯುಷ್ಮಾನ್ ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕಿತರ ವಿವಿಧ ಪರೀಕ್ಷೆಗಳು ಹಾಗೂ ಚಿಕಿತ್ಸೆಯ ವೆಚ್ಚವನ್ನು ಪಡೆಯುವಾಗ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕು. ಹೆಚ್ಚಿನ ಮೊತ್ತವನ್ನು ಪಡೆದಿದ್ದರೆಂದು ದೂರುಗಳಿದ್ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ನೀಡಿದಲ್ಲಿ ಹೆಚ್ಚುವರಿ ಹಣವನ್ನು ಮರುಪಾವತಿಸಲುಕ್ರಮ ಕೈಗೊಳ್ಳಲಾಗುವುದು ಎಂದರು.
ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಅಭ್ಯತೆಯಾಗುತ್ತಿರುವ ಬಗ್ಗೆ ಹಾಗೂ ಆಕ್ಸಿಜೆನ್‌ನ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದ ಅವರು, ಸರಬರಾಜಿನಲ್ಲಿ ಏನಾದರೂ ಕೊರತೆ ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ, ಶಾಸಕ ಡಾ. ಭರತ್ ಶೆಟ್ಟಿ.ವೈ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಎ.ಸಿ ಮದನ್‌ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.