ಕೊರೋನಾ ಸೋಂಕಿತರಿಗೂ ಮತದಾನ ಹಕ್ಕು

ಬೆಂಗಳೂರು, ಅ.29-ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊರೋನಾ ಸೋಂಕಿತರೂ ಸಹ ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 9 ವಾರ್ಡ್ ಗಳಿದ್ದು, ಕಳೆದ 17 ದಿನದಲ್ಲಿ 1,177 ಕೋವಿಡ್ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದೆ. ಆದರೆ, ಚುನಾವಣೆ ಹಿನ್ನೆಲೆ ಮತದಾನ ಮಾಡಲು ಇಚ್ಚಿಸುವವರಿಗೆ ಕಂಟ್ರೋಲ್ ರೂಂ ಸಿಬ್ಬಂದಿಗೆ ಕರೆ ಮಾಡಿದರೆ, ಮನೆಬಾಗಿಲಿಗೆ ಪಿಪಿಇ ಕಿಟ್ ಹಾಗೂ ಆಂಬುಲೆನ್ಸ್ ಬರಲಿದೆ.

ಮತದಾನದ ಕಡೆಯ ಒಂದು ಗಂಟೆ(5 ರಿಂದ 6) ಗಂಟೆಯವರೆಗೆ ಮತದಾನ ಮಾಡಿಸಿ, ಅದೇ ಆಂಬ್ಯುಲೆನ್ಸ್ ಮೂಲಕ ಮನೆಗೆ ಬಿಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

9 ವಾರ್ಡ್ ಗಳಿಗೆ ತಲಾ ಹತ್ತು ಆಂಬ್ಯುಲೆನ್ಸ್ ನಂತೆ ಒಟ್ಟು 90 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪಾಸಿಟಿವ್‌ನ ಲಕ್ಷಣ ಇರುವವರಿಗೆ ಕೂಡಾ ಪಾಲಿಕೆ ವತಿಯಿಂದ ವಾಹನ ಕಳುಹಿಸಲಾಗುತ್ತದೆ.

ಈ ಸಮಯದಲ್ಲಿ ಬೇರೆ ಮತದಾರರು ತಡವಾಗಿ ಮತ ಚಲಾಯಿಸಲು ಬಂದರೆ, ಮತಗಟ್ಟೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಇನ್ನೂ, ಇಂದಿನಿಂದ ನ.3ರವರೆಗೆ ಪಾಸಿಟಿವ್ ಅಗುವವರಿಗೆ, ಕಂಟ್ರೋಲ್ ರೂಂನಿಂದ ಕರೆ ಬರಲಿದೆ.