ಕೊರೋನಾ ಸಮಯದಲ್ಲಿ ದಾದಿಯರ, ಶುಶ್ರೂಷಕರ ಸೇವೆ ಅಪಾರ:ಶಾಸಕ ಖಂಡ್ರೆ

ಬೀದರ್ :ನ.14:ಕೊರೋನಾ ಸಮಯದಲ್ಲಿ ಜನ ತತ್ತರಿಸಿ ಹೊಗಿದ್ದಾಗ ಅರೆ ವೈದ್ಯಕೀಯ ಸಿಬ್ಬಂದಿ, ದಾದಿಯರು, ಶುಶ್ರೂಷಕ /ಶುಶ್ರೂಷಕಿಯರು ಮಹತ್ವದ ಪಾತ್ರ ವಹಿಸಿದ್ದರು ಇದಕ್ಕೆ ಇಂತಹ ನರ್ಸಿಂಗ್ ಕಾಲೇಜುಗಳೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸಕ ಈಶ್ವರ ಖಂಡ್ರೆ ನುಡಿದರು.
ಅವರು ಭಾನುವಾರ ನಗರದ ಹೊರವಲಯದಲ್ಲಿರುವ ಶಿವಲಿಂಗ ವಿದ್ಯಾವರ್ಧಕ ಸಂಸ್ಥೆಯಡಿ ನಡೆಯುತ್ತಿರುವ ಎಂಸಿ ವಸಂತಾ ನರ್ಸಿಂಗ್ ಕಾಲೇಜಿನ ಬೆಳ್ಳಿ ಹಬ್ಬ ಆಚರಣೆಗೆ ಕೆಕ್ ಕತ್ತರಿಸಿ ಚಾಲನೆ ನೀಡಿ ಮಾತನಾಡಿ, ಜನರಿಗೆ ಆರೋಗ್ಯವೇ ಭಾಗ್ಯ ಪ್ರಮುಖವಾಗಿದೆ. ಈ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ ಇದಕ್ಕೆ ಚಂದ್ರಕಾಂತ ಗದ್ದಗಿ ಇಲ್ಲಿ ಕಾಲೇಜು ಆರಂಭಿಸಿದ್ದು ನಮ್ಮ ಜಿಲ್ಲೆಗೆ ವರದಾನವಾಗಿದೆ.
ಇಂದಿನ ಆಧುನಿಕ ಯುಗದಲ್ಲಿಯು ಪ್ರೀತಿ, ವಿಶ್ವಾಸ ಹಾಗೂ ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡುವವರು ಎಂದರೆ ದಾದಿಯರು, ಶುಶ್ರೂಷಕರ ಪಾತ್ರವೇ ಪ್ರಮುಖವಾಗಿದೆ. ವಸಂತಾ ಕಾಲೇಜು 25ನೇ ವರ್ಷಾಚರಣೆ ಆಚರಿಸಿಕೊಳ್ಳುವುದು ನಮ್ಮೇಲ್ಲರಿಗೆ ಅಭಿಮಾನದ ಸಂಗತಿಯಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಆ ಸಂಸ್ಥೆಯವರು ಎಷ್ಟು ಕಷ್ಟ ಪಡಬೇಕಾಗುತ್ತದೆ ಎಂಬುದು ನನಗೆ ಗೊತ್ತು ಎಂದರು.
ಶಾಸಕ ರಹೀಮ್ ಖಾನ್ ಮಾತನಾಡಿ, ಜನರ ಆರೋಗ್ಯ ಕಾಪಾಡಲು ಹಾಗೂ ಅವರಿಗೆ ಸೇವೆ ನೀಡಲು ನರ್ಸಿಂಗ್ ಕಾಲೇಜುಗಳ ಪಾತ್ರ ಬಹಳ ಮುಖ್ಯವಾಗಿದೆ. ವಸಂತಾ ಕಾಲೇಜಿನ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತ ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಇದಕ್ಕೆ ಚಂದ್ರಕಾಂತ ಗದ್ದಗಿ ಅವರೇ ಕಾರಣಿಕರ್ತರು ಎಂದರು.
ಸಂಸ್ಥೆಯ ಅಧ್ಯಕ್ಷರಾದ ಚಂದ್ರಕಾಂತ ಗದ್ದಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಹೇಳಿದಂತೆ ಗುಡಿ ಕಟ್ಟಿದ್ದರೆ 15-20 ಜನ ಭಿಕ್ಷುಕರು ಹುಟ್ಟುತ್ತಾರೆ. ಶಾಲೆ ಕಟ್ಟಿದ್ರೆ 50 ರಿಂದ 100 ಜನ ವಿದ್ವಾಂಸರು ಹುಟ್ಟುತ್ತಾರೆ ಎಂದಿದ್ದರು ಅವರ ತತ್ವದಂತೆ ಸಮಾಜದ ಎಳಿಗೆಗೆ ಹಿಂದುಳಿದ ಬಡ ಹೆಣ್ಣು ಮಕ್ಕಳಿಗೆ ಆರ್ಥಿಕ ಸೌಲಭ್ಯ ಒದಗಿಸಿ ಶಿಕ್ಷಣ ನೀಡಿದ್ದೇನೆ ಎಂದರು.
ನಾನು ಈ ಹಿಂದೆ ಆರ್ಥಿಕ ಸಮಸ್ಯೆ ಇದ್ದರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಕಾಲೇಜಿನ ಕೀರ್ತಿ ಉತ್ತುಂಗಕ್ಕೆ ಕೊಂಡಯ್ಯಬೇಕೆಂಬ ನನ್ನ ಗುರಿ ಈಗ ಸಾರ್ಥಕವಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೋಲಕತ್ತಾ, ಮುಂಬೈ, ಸೋಲಾಪೂರ, ಮದ್ರಾಸ, ಅಮೇರಿಕಾ, ಚೀನಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಲ್ಲಿ 10ರಿಂದ 15 ಸಾವಿರ ಜನರು ಸೇವೆಯಲ್ಲಿದ್ದಾರೆ ಇದು ನನಗೆ ಸಂತೋಷದ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಶಿವಲಿಂಗ ವಿದ್ಯಾವರ್ಧಕ ಸಂಸ್ಥೆಯ 25 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಎಸ್‍ಪಿ ಸುಳ್ಳದ ಅವರ ಸಂಪಾದನೆಯಲ್ಲಿ ರಚನೆಗೊಂಡ ‘ಚಿನ್ನಚಂದ್ರ’ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಅಲ್ಲದೇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಗದ್ದಗಿ ಅವರಿಗೆ ಅದ್ದೂರಿ ಸನ್ಮಾನ ನಡೆಯಿತು.
ಬೆಂಗಳೂರಿನ ಡಾ. ವಿದ್ಯಾರಾಜು, ಎಸ್‍ಪಿ ಸುಳ್ಳದ್, ಕೋಡ್ಲಾದ ನಂಜುಂಡ ಸ್ವಾಮಿಗಳು, ಕಲಬುರಗಿಯ ಜಿಲ್ಲಾ ಶಸ ಚಿಕಿತ್ಸಕ ಡಾ. ಅಂಬಾರಾಯ ಎಸ್ ರುದ್ರವಾಡಿ, ಬೆಂಗಳೂರಿನ ಮಾಜಿ ಮೆಯರ್ ಸಂಪತ ರಾಜ್, ಸೇಡಂನ ಸಂಗಣ್ಣ ಜಿ. ಪೆÇಲೀಸ್ ಪಾಟೀಲ್, ಕಲಬುರಗಿಯ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಧೂಳಪ್ಪ ದೊಡ್ಡಮನಿ, ಸಂಸ್ಥೆಯ ಉಪಾಧ್ಯಕ್ಷ ಡಾ. ಅನಮೋಲ ಮೋದಿ, ಕಾರ್ಯದರ್ಶಿ ಡಾ. ಚಿನ್ನಮ್ಮ ಸಿ ಗದ್ದಗಿ, ಸಂಸ್ಥೆಯ ಖಜಾಂಚಿ ಡಾ. ಪ್ರೀಯಾ ಗದ್ದಗಿ ಮೋದಿ, ಬೀದರ್ ಹಾಗೂ ಕಲಬುರಗಿ ಕಾಲೇಜಿನ ಪ್ರಾಚಾರ್ಯರು ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.