ಕೊರೋನಾ ವಿರುದ್ಧ ಹೋರಾಡಿ ಗೆದ್ದ ದಸ್ಮಾ: ವಿದ್ಯಾನಗರದಲ್ಲಿ ಸಂಭ್ರಮ

ಕಲಬುರಗಿ.ನ.11: ಶರಣ ಸಂಕುಲದಲ್ಲಿ ಪ್ರಖ್ಯಾತರಾದ ಈರಣ್ಣಾ ಆರ್. ದಸ್ಮಾ ಅವರು ಕೊರೋನಾ ಸೋಂಕಿನಿಂದ ಗುಣಮುಖರಾಗಿರುವುದು ಅವರ ಪ್ರದೇಶವಾದ ನಗರದ ಬಸವೇಶ್ವರ್ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರದ ನಿವಾಸಿಗಳಲ್ಲಿ ಸಂಭ್ರಮವನ್ನು ಹುಟ್ಟುಹಾಕಿದೆ.
ವಿದ್ಯಾನಗರ್ ಕಾಲೋನಿಯ ಭೀಷ್ಮ ಪಿತಾಮಹ ಎಂಬ ಖ್ಯಾತಿ ಪಡೆದ ಈರಣ್ಣಾ ಆರ್. ದಸ್ಮಾ ಅವರಿಗೆ ಕೊರೋನಾ ಒಕ್ಕರಿಸಿದ್ದರಿಂದ ಸುಮಾರು 1 ತಿಂಗಳ ಆಸ್ಪತ್ರೆಯಲ್ಲಿ, 2 ತಿಂಗಳವರೆಗೆ ಲಂಗಸ್ ಸಮಸ್ಯೆಯೊಂದಿಗೆ ಆಮ್ಲಜನಕ ಸಹಾಯದಿಂದ ಮನೆಯಲ್ಲಿ ಹೀಗೆ 3 ತಿಂಗಳವರೆಗೆ ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿ “ಈಸಬೇಕು ಇದ್ದು ಜಯಿಸಬೇಕು” ಎಂಬ ಮಾತಿನಂತೆ ಈಗ ಗುಣಮುಖರಾಗಿದ್ದು. ಮತ್ತೆ ಧಾರ್ಮಿಕ ಸೇವೆ ಮಾಡಲು ಹುಮ್ಮಸ್ಸು ಬಂದಿದೆ ಎಂದು ವಿದ್ಯಾನಗರದ ವೆಲಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ್ ಅಂಡಗಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೊರೋನಾ ಕಾಲಿಟ್ಟ ದಿನದಿಂದ ಕಷ್ಟ-ನಷ್ಟದಲ್ಲಿ ಜೀವನ ನಡೆಸುತ್ತಿರುವ ಎಲ್ಲರ ಮಧ್ಯದಲ್ಲಿಯೂ “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ, ಕೊಟ್ಟಿದ್ದು ಕೆಟ್ಟಿತ್ತೆನೆಡಬೇಡ, ಅದು ಮುಂದೆ ಕಟ್ಟಿಹದು ಬುತ್ತಿ ಸರ್ವಜ್ಞ” ಎಂಬ ಶರಣರ ವಾಣಿಯಂತೆ ಲಕ್ಷಾಂತರ ರೂ.ಗಳ ಹಣವನ್ನು ದೇಣಿಗೆ ನೀಡಲು ಮುಂದೆ ಬಂದ ದಾನಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ. ಅಂತವರು ಸಾವಿರ-ಸಾವಿರ ಆಗಲಿ. ಸಮಾಜದಲ್ಲಿ ಇನ್ನೊಬ್ಬರಿಗೆ ಮಾದರಿಯಾಗುವಂತಹ ಉದಾರ ಮನೋಭಾವದ ವ್ಯಕ್ತಿತ್ವವನ್ನು ದಸ್ಮಾ ಅವರು ಹೊಂದಿದ್ದಾರೆ ಎಂದು ಅಂಡಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೊಸೈಟಿ ಅಧ್ಯಕ್ಷ ಮಲ್ಲಿನಾಥ್ ದೇಶಮುಖ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಸೊಸೈಟಿ ಸಂಸ್ಥಾಪಕರಲ್ಲಿ ಒಬ್ಬರಾದ ದಸ್ಮಾ ಅವರು ವಿದ್ಯಾನಗರ್ ವಚನೋತ್ಸವ ಸಮಿತಿಯ ಸಂಚಾಲಕರಾಗಿ 85 ವರ್ಷದ ಇಳಿ ವಯಸ್ಸಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೋನಿಯ ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನದಲ್ಲಿ ಪ್ರಪ್ರಥಮವಾಗಿ ಪುರಾಣ ಪದ್ದತಿ ಪ್ರಾರಂಭಿಸಿದ ಕೀರ್ತಿ ದಸ್ಮಾ ಅವರಿಗೆ ಸಲ್ಲುತ್ತದೆ. ಆಡಿಟ್ ಅಧಿಕಾರಿಗಳಾಗಿದ್ದ ಅವರು ಫ್ರೆಂಡ್ಸ್ ಮ್ಯೂಚಲ್ ಫಂಡ್ ಎಂಬ ಹೆಸರಿನಲ್ಲಿ ಸೊಸೈಟಿಯ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿ ಹಾಕುವ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ದಸ್ಮಾ ಅವರು ಮಾತನಾಡಿ, ಶ್ರೀಶೈಲ್ ಮಲ್ಲಯ್ಯನ ಆಶಿರ್ವಾದಿಂದ ನನಗೆ ಮರುಜನ್ಮ ಸಿಕ್ಕಿದೆ. ಮತ್ತೆ ನಾನು ಧಾರ್ಮಿಕ ಸೇವೆ ಪ್ರಾರಂಭಿಸುತ್ತೇನೆ. ನನ್ನ ಚಿಕ್ಕ ದೇಣಿಗೆ ಮಲ್ಲಿಕಾರ್ಜುನ್ ದೇವಸ್ಥಾನಕ್ಕೆ ರೂಪಾಯಿ 1,11,111 ರೂ.ಗಳು (ಒಂದು ಲಕ್ಷ ಹನ್ನೊಂದು ಸಾವಿರದ ಒಂದು ನೂರಾ ಹನ್ನೊಂದು ರೂ.ಗಳು) ಸ್ವೀಕರಿಸಬೇಕೆಂದು ನಗದು ಹಣ ಕೈಯಲ್ಲಿ ಹಿಡಿದು ಕೇಳಿಕೊಂಡರು. ಆ ಸಂದರ್ಭ ಅಲ್ಲಿದ್ದವರಿಗೆ ಆಶ್ಚರ್ಯದೊದಿಗೆ ಸಂತೋಷವನ್ನೂ ಹುಟ್ಟುಹಾಕಿತು. ದಸ್ಮಾ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಆಯುಷ್ಯ ಕರುಣಿಸಲಿ ಎಂದುಹಾರೈಸಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.