ಕೊರೋನಾ ಲಾಕ್ ಡೌನ್ ಗೆ ಕೋಟೆನಾಡು ಸ್ತಬ್ದ

ಚಿತ್ರದುರ್ಗ,ಏ.29: ಕೊರೋನಾ ಎರಡನೆ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ಬುಧವಾರದಿಂದ ಹದಿನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿರುವುದರಿಂದ ಕೋಟೆನಾಡು ಚಿತ್ರದುರ್ಗ ವ್ಯಾಪಾರ ವಹಿವಾಟಿಲ್ಲದೆ ಸ್ಥಬ್ದಗೊಂಡಿದೆ.
ದಿನವೂ ನೂರಾರು ಪ್ರಯಾಣಿಕರು, ಹತ್ತಾರು ಬಸ್‌ಗಳಿಂದ ಗಿಜಿಗುಡುತ್ತಿದ್ದ ಸರ್ಕಾರಿ ಬಸ್‌ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಯಾಣಿಕರನ್ನು ಕೂಗಿ ಕರೆಯುತ್ತಿದ್ದ ನಿರ್ವಾಹಕರುಗಳ ಸದ್ದಡಗಿದೆ. ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದರೂ ಒಂದಿಬ್ಬರು ಸಿಬ್ಬಂದಿಗಳು ಮಾತ್ರ ಬಸ್‌ನಿಲ್ದಾಣದಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಬೇಕಾಗಿದೆ. ಇಡಿ ನಗರದಲ್ಲಿ ಎಲ್ಲಾ ಬಗೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದರಿಂದ ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ. ಗಂಟೆಗೊಮ್ಮೆ ಕಾಫಿ, ಟೀ. ಹೀರುವ ಅಭ್ಯಾಸವುಳ್ಳವರಂತೂ ಎಲ್ಲಿಯಾದರೂ ಚಿಕ್ಕ ಟೀ ಅಂಗಡಿ ತೆರೆದಿದೆಯೇನೋ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಬೇರೆ ಊರುಗಳಿಂದ ಇಲ್ಲಿಗೆ ಬರುವವರು ಹಾಗೂ ಇಲ್ಲಿಂದ ಬೇರೆ ಊರುಗಳಿಗೆ ಹೋಗುವವರಿಗೆ ಬಸ್‌ಗಳ ಸಂಚಾರವಿಲ್ಲದ ಕಾರಣ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸದ್ದಿಲ್ಲದಂತಾಗಿದೆ. ಕೆಲವರು ದ್ವಿಚಕ್ರ ವಾಹನಗಳಲ್ಲಿ ಕಾರ್ಯನಿಮಿತ್ತ ತಿರುಗಾಡುತ್ತಿರುವುದನ್ನು ಬಿಟ್ಟರೆ ಬೇರೆ ಎಲ್ಲಿಯೂ ಜನಸಂದಣಿಯಿಲ್ಲ. ತುರುವನೂರು ರಸ್ತೆ, ಚಳ್ಳಕೆರೆ ಗೇಟ್, ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-13 ಹೊರವಲಯದಲ್ಲಿ ಪೊಲೀಸ್ ಕಾವಲು ಕಾಯುತ್ತಿದ್ದು, ಬೇರೆ ಊರುಗಳಿಂದ ಇಲ್ಲಿಗೆ ಬರುವವರನ್ನು ತಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ.ಬೆಳಿಗ್ಗೆ ಆರರಿಂದ ಹತ್ತು ಗಂಟೆಯತನಕ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ನಾಲ್ಕು ತಾಸು ತರಕಾರಿಗೆ ಜನ ಮುಗಿಬೀಳುವುದನ್ನು ಹೊರತುಪಡಿಸಿದರೆ ಉಳಿದಂತೆ ದಿನವಿಡಿ ಯಾರು ರಸ್ತೆಯಲ್ಲಿ ವಿನಾ ಕಾರಣ ಓಡಾಡುವುದು ಕಂಡು ಬರುತ್ತಿಲ್ಲ. ಆಸ್ಪತ್ರೆ, ಬ್ಯಾಂಕ್, ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬರುವವರ ಸಂಖ್ಯೆಯೂ ವಿರಳವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುವ ಪಡ್ಡೆ ಹುಡುಗರ ಹಾವಳಿ ಇಲ್ಲದಂತಾಗಿದೆ. ರೈತರ ಬೆಳೆಗಳನ್ನು ಖರೀದಿಸಬೇಕಾಗಿದ್ದ ಎ.ಪಿ.ಎಂ.ಸಿ.ಮೌನವಾಗಿದೆ. ಕೆಲಸವಿಲ್ಲದೆ ಹಮಾಲಿಗಳು ತಮ್ಮ ಎತ್ತು ಗಾಡಿಗಳ ಜೊತೆ ತಲೆ ಮೇಲೆ ಕೈಹೊತ್ತು ಕೂತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿ ಕಾಣುತ್ತದೆ. ಒಟ್ಟಾರೆ ಕೊರೋನಾ ನಿಗ್ರಹಕ್ಕೆ ಲಾಕ್‌ಡೌನ್ ಒಂದೆ ಮಾರ್ಗಸೂಚಿಯಾಗಿರುವುದರಿಂದ ಸಾರ್ವಜನಿಕರು ಎಚ್ಚೆತ್ತುಕೊಂಡು ಬೀದಿಗೆ ಬರದಂತೆ ಮನೆಯಲ್ಲಿಯೇ ಕ್ಷೇಮವಾಗಿ ಇರುವುದು ಒಳಿತು.