ಕೊರೋನಾ ಲಾಕ್‌ಡೌನ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಹಕ ಸೇವಾ ಕೇಂದ್ರಗಳ ಸ್ಥಗಿತ

ಧರ್ಮಸ್ಥಳ , ಮೇ ೩- ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸರಕಾರ ಘೋಷಿಸಿರುವ ಲಾಕ್‌ಡೌನ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸ್ವಸಹಾಯ ಸಂಘಗಳ ಸದಸ್ಯರಿಗೆ ತೊಂದರೆಯಾಗದಂತೆ ದಿನಾಂಕ ಮೇ ೩ ರಿಂದ ದಿನಾಂಕ ಮೇ ೧೫ ರವರೆಗೆ ಯೋಜನೆಯ ಎಲ್ಲ ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಮೇ ೨ರಂದು ಭಾನುವಾರ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವಾರಗಳ ಕಾಲ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವರೇ ನಿರ್ಧರಿಸಲಾಗಿದೆ. ಇದರಿಂದಾಗಿ ಯೋಜನೆಯ ಗ್ರಾಹಕ ಸೇವಾ ಕೇಂದ್ರಗಳು ಈ ಅವಧಿಯಲ್ಲಿ ಕೆಲಸ ನಿರ್ವಹಿಸುವುದಿಲ್ಲ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಹಣ ಸಂಗ್ರಹಣೆ ಮಾಡುವುದನ್ನಾಗಲಿ, ತಮ್ಮ ಸಾಲದ ಕಂತುಗಳನ್ನು ಕಟ್ಟುವುದನ್ನಾಗಲಿ ಎರಡು ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಈ ವಿಷಯವನ್ನು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್‌ರವರು ಪ್ರಕಟಿಸಿದ್ದಾರೆ. ಮುಂದುವರೆದ ವಾರದ ಕಂತುಗಳನ್ನು ಕಟ್ಟುವ ಬಗ್ಗೆ ಸಧ್ಯದಲ್ಲಿಯೇ ಪ್ರತ್ಯೇಕವಾಗಿ ತಿಳುವಳಿಕೆ ನೀಡಲಾಗುವುದೆಂದುಅವರು ತಿಳಿಸಿದ್ದಾರೆ.
ತಾಲೂಕು ಮಟ್ಟದಲ್ಲಿ ಕೋವಿಡ್ ಪೀಡಿತರಿಗೆ ಉಚಿತ ವಾಹನ ಸೌಲಭ್ಯ :ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಮಟ್ಟದಲ್ಲಿ ಹಬ್ಬುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಪೀಡಿತರಿಗೆ ಉಚಿತ ಸಂಚಾರಿ ವಾಹನ ವ್ಯವಸ್ಥೆಯನ್ನು ಒದಗಿಸುವರೇ (ಬೆಂಗಳೂರು ನಗರವನ್ನು ಹೊರತುಪಡಿಸಿ) ತಾಲೂಕು ಒಂದಕ್ಕೆ ತಲಾ ೨ ರಂತೆ ರಾಜ್ಯದಾದ್ಯಂತ ಒಟ್ಟು ೩೫೦ ವಾಹನಗಳನ್ನು ವ್ಯವಸ್ಥೆ ಮಾಡುವರೇ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಆದೇಶಿಸಿದ್ದಾರೆ.
ಅದರಂತೆ ಮೇ ೩ ರಿಂದ ಮೊದಲ್ಗೊಂಡು ಮುಂದಿನ ೨ ವಾರಗಳ ಕಾಲ ಯೋಜನೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಲಾ ೨ ರಂತೆ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನಗಳು ಗ್ರಾಮೀಣ ಪ್ರದೇಶದ ಜನರಿಗೆ ರೋಗ ಪೀಡಿತರು ಆಸ್ಪತ್ರೆಗೆ ತೆರಳಲು ಅಥವಾ ಆಸ್ಪತ್ರೆಯಿಂದ ಹಿಂದಿರುಗಲು ಲಭ್ಯವಿರುತ್ತವೆ. ಇವುಗಳು ಪ್ರಾಮುಖ್ಯವಾಗಿ ಬಡ ಜನರಿಗೆ ದೊರಕುವಂತೆ ಮಾಡಲಾಗಿದ್ದು, ಈ ವಾಹನ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಲು ಆಯಾ ತಾಲೂಕಿನ ಯೋಜನಾಧಿಕಾರಿಯ ಮೊಬೈಲ್ ನಂಬರಿಗೆ ಕರೆ ಮಾಡಬಹುದಾಗಿದೆ. ಈ ಸೌಲಭ್ಯವು ಉಚಿತವಾಗಿ ಲಭ್ಯವಿದ್ದು, ಆಕಸ್ಮಾತ್ ಕರೆ ಬರುವ ಸಮಯದಲ್ಲಿ ವಾಹನವು ಬೇರೆ ರೋಗಿಗಳ ಸೇವೆಯಲ್ಲಿ ತೊಡಗಿದ್ದರೆ ಆದ್ಯತೆಯ ನೆಲೆಯಲ್ಲಿ ಮೊದಲು ಕರೆ ಬಂದವರಿಗೆ ಮೊದಲ ಸೇವೆ ಎಂಬಂತೆ ಲಭ್ಯವಿರುತ್ತದೆ. ಈ ವ್ಯವಸ್ಥೆಯು ರೋಗಿಯ ಪ್ರಯಾಣಕ್ಕೆ ಲಭ್ಯವಿದೆಯೇ ಹೊರತು ಇದರಲ್ಲಿ ಆಂಬ್ಯುಲೆನ್ಸ್ ಸೌಲಭ್ಯವಿರುವುದಿಲ್ಲ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿರುತ್ತಾರೆ.
ಒಟ್ಟಾರೆಯಾಗಿ ಕೊರೋನಾ ರೋಗದ ವಿರುದ್ಧ ಹೋರಾಟದ ಈ ಘಳಿಗೆಯಲ್ಲಿ ಯೋಜನೆಯು ಸರಕಾರ ಮತ್ತು ಇತರ ಸಂಘ ಸಂಸ್ಥೆಗಳ ಜೊತೆಯಲ್ಲಿ ಸೇರಿ ಕೆಲಸ ಮಾಡುತ್ತಿದೆಯೆಂದು ಯೋಜನೆಯ ಪತ್ರಿಕಾ ಪ್ರಕಟಣೆಯಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್.ಮಂಜುನಾಥ್ ತಿಳಿಸಿರುತ್ತಾರೆ.