ಕೊರೋನಾ ಮುಕ್ತ ಜಿಲ್ಲೆಯತ್ತ ದಾಪುಗಾಲು

ಚಾಮರಾಜನಗರ, ನ.04:- ಸತತ ಮೂರನೇ ದಿನ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಇಳಿದಿವೆ. ಚಾಮರಾಜನಗರ ಕೋವಿಡ್ ಆಸ್ಪತ್ರೆ ಖಾಲಿ ಖಾಲಿಯಾಗಿದೆ. ಈ ಮೂಲಕ ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯತ್ತ ದಾಪುಗಾಲು ಇಟ್ಟಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ವ್ಯಕ್ತಿ ಕೂಡ ಗುಣಮುಖನಾಗಿ ಮನೆಗೆ ಮರಳಿದ್ದರಿಂದ ಕೋವಿಡ್ ಆಸ್ಪತ್ರೆ ಖಾಲಿಯಾಗಿದೆ. ಜಿಲ್ಲೆಯ 6 ಮಂದಿ ಸೋಂಕಿತರು ಹೋಂ ಐಸೊಲೇಷನ್‍ನಲ್ಲಿದ್ದಾರೆ. ಮಂಗಳವಾರ 549 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಎಲ್ಲಾ ವರದಿಗಳು ನೆಗಟಿವ್ ಬಂದಿವೆ.
ಜಿಲ್ಲೆಯಲ್ಲಿ ಈವರೆಗೆ 32,560 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 32,015 ಮಂದಿ ಗುಣಮುಖರಾಗಿದ್ದಾರೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡಿದ್ದ ಕೊರೊನಾ ಏರುಗತಿ ಜಿಲ್ಲೆಗೆ ಆತಂಕಕಾರಿಯಾಗಿ ಪರಿಣಮಿಸಿತ್ತು. ಸದ್ಯ, ಈಗ ಕೊರೊನಾತಂಕ ದೂರವಾಗಿದೆ.
ಜನರು ಇದೇ ರೀತಿ ನಿರ್ಲಕ್ಷ್ಯ ವಹಿಸದೇ ಮುನ್ನೆಚ್ಚರಿಕೆ ವಹಿಸಿದಾಗ ಮಾತ್ರ ಈ ಸಡಗರ ಮುಂದುವರೆಯಲು ಸಾಧ್ಯ ಎಂಬುದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.