ಕೊರೋನಾ ಮುಕ್ತವಾಗೋದಾದ್ರೆ ನನ್ನ ರಾಜೀನಾಮೆ: ಎಸ್.ಟಿ.ಎಸ್

ಮೈಸೂರು, ಜೂ.05: ಮೈಸೂರಿನ ಬೆಳವಣಿಗೆ ನೋಡಿ ನನಗೆ ವೈಯುಕ್ತಿಕವಾಗಿ ನೋವಾಗಿದೆ. ಆ ನೋವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ, ಈಗಲೂ ಹೇಳಿದ್ದೇನೆ. ನನ್ನ ರಾಜೀನಾಮೆಯಿಂದ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಅನ್ನೋದಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವರು ಕಾಂಗ್ರೆಸ್‍ಗೆ ಅದರಿಂದ ಸಂತೋಷ ಆಗುವುದಾದರೆ ರಾಜೀನಾಮೆ ಕೊಡುತ್ತೇನೆ. ನನ್ನ ತಪ್ಪೇನು ಅಂತ ಹೇಳಿದರೆ ನಡವಳಿಕೆ ತಿದ್ದುಕೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ, ಆಯುಕ್ತರ ನಡುವಿನ ಜಗಳದ ನೋವು ತೋಡಿಕೊಂಡರು.
ಒಬ್ಬರೇ ಕೊರೋನಾ ನಿಯಂತ್ರಣ ಮಾಡ್ತಿದ್ದಾರೆ ಅನ್ನೋ ಭ್ರಮೆ ಬೇಡ. ಇದು ಟೀಂ ವರ್ಕ್. 11 ಕ್ಷೇತ್ರದ ಶಾಸಕರು ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಪೆÇಲೀಸರು, ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಅಧಿಕಾರಿಗಳ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿ ಸಂಜೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡುತ್ತೇನೆ.ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ನಾನು ಯಾವುದೇ ಮಾಹಿತಿ ನೀಡಿಲ್ಲ. ಸಿಎಂ ಅವರದ್ದೇ ಆದ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.
ಸಚಿವ ಎಸ್ ಟಿ ಸೋಮಶೇಖರ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ರಾಜೀನಾಮೆಯಿಂದ ಮೈಸೂರಿಗೆ ಒಳ್ಳೆಯದಾದರೆ ರಾಜೀನಾಮೆ ನೀಡಲು ಸಿದ್ದ.ಎರಡು ಮೂರು ದಿನದಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈ ವಿಚಾರವನ್ನು ಸಿಎಂ ಅವರಿಗೂ ಹೇಳಿದ್ದೇನೆ. ಆದ್ದರಿಂದ ದಯಮಾಡಿ ಇದನ್ನು ಸರಿಪಡಿಸಿ ಅಂತ ಮನವಿ ಮಾಡಿದ್ದೇನೆ. ಸಿಎಂ ಬಗ್ಗೆ ವಿಶ್ವಾಸವಿದೆ. ಸಿ ಎಸ್ ಮೈಸೂರಿನ ಎಲ್ಲಾ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದರು.
ಮೈಸೂರಿನಲ್ಲಿ ಜಿಲ್ಲಾಧಿಕಾರಿ ಹಾಗೂ ಆಯುಕ್ತೆಯವರ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ನಾನು ಹೇಳೋದಿಲ್ಲ. ಎಲ್ಲವನ್ನು ಮುಖ್ಯ ಕಾರ್ಯದರ್ಶಿ ಬಂದು ನೋಡಿದ್ದಾರೆ. ಇಲ್ಲಿ ಅವರು ಸಂಗ್ರಹಿಸಿದ ಮಾಹಿತಿ ಸಿಎಂಗೆ ವರದಿ ಮಾಡುತ್ತಾರೆ. ನಾನು ಇಂದು ಸಂಜೆ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳೇ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.