ಕೊರೋನಾ ಮಹಾಮಾರಿ ಬಗ್ಗೆ ಅಸಡ್ಡೆ ಬೇಡ : ಮಾಲೀಕಯ್ಯಾ

ಅಫಜಲಪುರ:ನ.13: ಕೊರೋನಾ ಜೊತೆ ಹೋರಾಡಿ, ಭಗವಂತನ ಕೃಪೆಯಿಂದ ಗೆದ್ದು ಬಂದಿದ್ದೇನೆ. ಯಾರೊಬ್ಬರೂ ಕೋವಿಡ್-19 ಬಗ್ಗೆ ಅಸಡ್ಡೆ ತೋರಬೇಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯಾ ಗುತ್ತೇದಾರ್ ಸಲಹೆ ನೀಡಿದರು.

ಸ್ಟೇಷನ್ ಗಾಣಾಗಾಪೂರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಬಳಲುತ್ತಿದ್ದಾಗ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನಾನು ಗುಣವಾಗಲಿ ಎಂದು ನಿರಂತರ ಪ್ರಾರ್ಥಿಸಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದರು.

ಭೀಮಾ ಪ್ರವಾಹದಿಂದಾಗಿ ಜಿಲ್ಲೆ ಮತ್ತು ಅಫಜಲಪುರ ಮತಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಮನೆ, ಬೆಳೆ ಹಾನಿಯಾಗಿದೆ. ಸಾಕಷ್ಟು ಜನರು ಬೀದಿಗೆ ಬಂದಿದ್ದಾರೆ. 9 ಹಳ್ಳಿಗಳು ಮುಳುಗಡೆಯಾಗಿವೆ. 3300 ಮನೆಗಳಿಗೆ ಹಾನಿಯಾಗಿದೆ,. ಈಗಾಗಲೆ ಪ್ರತಿ ಹಾನಿಯಾದ ಮನೆಗೆ 10,000ರೂ ನೀಡಲಾಗಿದೆ. ಒಟ್ಟು 3 ಕೋಟ 40 ಲಕ್ಷ ಪರಿಹಾರ ನೀಡಲಾಗಿದೆ. ಅಲ್ಲದೆ 470 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು 9 ಕೋಟಿ ಹಾನಿಯಾಗಿದೆ. ಅಲ್ಲದೆ 45000 ಹೆಕ್ಟೇರ್ ಜಮೀನಿನಲ್ಲಿ ಬೆಳೆದ ನಾನಾ ಬೆಳೆಗಳು ಹಾಳಾಗಿದ್ದು, 35 ಕೋಟಿ ನಷ್ಟವಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು, ಸಿಎಂ ಬಿಎಸ್‍ವೈ ಜತೆ ಚರ್ಚಿಸಿ ಪರಿಹಾರ ಒದಗಿಸಿಕೊಡುವೆ. ಅಲ್ಲದೆ ಮುಳುಗಡೆಯಾದ ಹಳ್ಳಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾವು ಅಧಿಕಾರದಲ್ಲಿದ್ದಾಗ ಭೀಮಾ ನದಿಗೆ 27 ಬ್ಯಾರೇಜುಗಳು ನಿರ್ಮಿಸುವ ಮೂಲಕ ರಾಜ್ಯದಲ್ಲಿಯೆ ದಾಖಲೆ ಮಾಡಲಾಗಿದೆ. ಹೀಗಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ ನಮ್ಮ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟದ್ದು ಸೂರ್ಯ ಚಂದ್ರ ಇರುವರೆಗೆ ಶಾಶ್ವತ ಎಂದು ಹೇಳಿದರು.

ಚಿನ್ಮಯಗಿರಿಯ ಶ್ರೀವೀರ ಮಹಾಂತ ಶಿವಾಚಾರ್ಯರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ಬಿಜೆಪಿ ತಾಲೂಕಾ ಅಧ್ಯಕ್ಷ ಶೈಲೇಶ ಗುಣಾರಿ, ಪ್ರಮುಖರಾದ ಕುಶಾಲ್ ಗುತ್ತೇದಾರ್, ವಿಶ್ವನಾಥ ರೇವೂರ, ಶಿವಪುತ್ರಪ್ಪ ಕರೂರ, ರಮೇಶ ಮಾಸ್ತರ, ದೇವಿಂದ್ರ ಜಮಾದಾರ, ಗುರುಸಾಲಿಮಠ, ಚಂದಮ್ಮ ಪಾಟೀಲ್, ಶೋಭಾ ಬಾಣಿ, ತನ್ವೀರ್ ಮಣೂರ, ಮಂಜೂರ ಅಗರಖೇಡ, ನಬಿಲಾಲ ಮಾಶಾಳಕರ, ಸಿದ್ದು ಸಾಲಿಮನಿ, ಸಿದ್ದು ದಿಕ್ಸಂಗಿ ಇದ್ದರು.