ಕೊರೋನಾ ಭಯ ನಿವಾರಿಸಿ ಆರೋಗ್ಯ ಸಾಧಿಸಿ ಮಾಲಿಕೆ

ಸಾಣೆಹಳ್ಳಿ.ಮೇ.೨೦: ಇದುವರೆಗೂ ನೂರಾರು ಅಧ್ಯಾಪಕರು ಕೊರೋನಕ್ಕೆ ಬಲಿಯಾಗಿರುವುದು ದುರ್ದೈವದ ಸಂಗತಿ. ಈ ಸಂಖ್ಯೆ ಹೆಚ್ಚದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ವೆಬಿನಾರ್ ನಲ್ಲಿ ಮಾತನಾಡಿದ ಅವರು ವೃತ್ತಿಯಿಂದ ಅಧ್ಯಾಪಕ, ವೈದ್ಯ, ವಕೀಲ, ರಾಜಕಾರಣಿ… ಏನೇ ಆಗಿದ್ದರೂ ಮೂಲತಃ ಮನುಷ್ಯರೇ. ಮನುಷ್ಯರ ಸಂತಾನ ರೂಪಿಸುವ ಹೊಣೆಗಾರಿಕೆ ಹೊತ್ತಿರುವ, ಗುರುಸ್ಥಾನದಲ್ಲಿ ನಿಂತಿರುವ ಶಿಕ್ಷಕರಿಗೆ ವಿಶೇಷ ಜವಾಬ್ದಾರಿ ಇದೆ. ಈ ಕೋವಿಡ್ ಕಾಲದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ಇದೆ. ಮೊದಲು ತಮ್ಮನ್ನು ತಾವು ಗೆಲ್ಲಬೇಕು. ಆತ್ಮವಿಶ್ವಾಸದಿಂದಿರಬೇಕು. ಅತಿ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ಕರೋನಾ ವೈರಾಣು ಹತ್ತಿರ ಬರದಂತೆ, ಹರಡದಂತೆ ಇರುವ ಸಕಲ ಮುನ್ನೆಚ್ಚರಿಕೆಗಳನ್ನೂ ಯಾವುದೇ ಮುಜಗರವಿಲ್ಲದೆ ಪಾಲಿಸಬೇಕು.ಇದೊಂದು ಮನುಕುಲದ ಉಳಿವಿಗಾಗಿನ ಹೋರಾಟ. ಸ್ವಾತಂತ್ರ್ಯ ಹೋರಾಟವೂ ಸೇರಿದಂತೆ ಈ ಹಿಂದಿನ ಹೋರಾಟಗಳ ಬಗ್ಗೆ ಕೇಳಿದ್ದೆವು, ಓದಿದ್ದೆವು, ಪಾಠ ಮಾಡುತ್ತಿದ್ದೆವು. ಆದರೆ ಖುದ್ದಾಗಿ ಭಾಗವಹಿಸುವ ಸಂದರ್ಭ ಬಂದಿದೆ. ಯಾವುದೇ ಕಾರಣಕ್ಕೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಬಾರದು ಎಂದರು.