ಕೊರೋನಾ ಪ್ರಕರಣ: ಬೊಳಿಯಾರು ಪ್ರದೇಶ ಕಂಟೈನ್ಮೆಂಟ್ ಜೋನ್ ಘೋಷಣೆ

ಬೆಳ್ತಂಗಡಿ, ಮೇ ೩- ಧರ್ಮಸ್ಥಳ ಗ್ರಾಮದ ಬೊಳಿಯಾರು ಪ್ರದೇಶದಲ್ಲಿ ಕೊರೋನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗಿರುವ ಹಿನ್ನಲೆ ಯಲ್ಲಿ ತಾಲೂಕು ಆಡಳಿತದ ಸೂಚನೆಯಂತೆ ಬೊಳಿಯಾರು ಪ್ರದೇಶವನ್ನು ಕಂಟೈ ನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಬೊಳಿಯಾರು ಪ್ರದೇಶದ ೧೬ ಮನೆಗಳಲ್ಲಿ ಸುಮಾರು ೩೬ ಕೊರೋನಾ ಪ್ರಕರಣಗಳು ದಾಖಲಾಗಿದೆ. ಇದೀಗ ಇಲ್ಲಿನ ಮುಖ್ಯ ರಸ್ತೆಯನ್ನು ಮುಚ್ಚಲಾಗಿದ್ದು
ಬೊಳಿಯಾರು ಪ್ರದೇಶದವರು ಯಾರು ಕೂಡ ಹತ್ತು ದಿನಗಳ ವರೆಗೆ ಹೊರಗೆ ಹೋಗುವಂತಿಲ್ಲ. ಸದ್ರಿ ಪ್ರದೇಶಕ್ಕೆ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸದ್ರಿ ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅಗತ್ಯವಾದ ದಿನ ನಿತ್ಯದ ವಸ್ತುಗಳಿಗೆ ಗ್ರಾಮ ಪಂಚಾಯತಿನಿಂದ ಕ್ರಮವಹಿಸಲಾಗುವುದು. ಎಂದು ಪಂಚಾಯತಿನ ಅಧಿಕಾರಿಗಳು ತಿಳಿಸಿದ್ದಾರೆ.
ಬೊಳಿಯಾರು ಪ್ರದೇಶಕ್ಕೆ ಗ್ರಾಮ ಪಂಚಾಯತ್ ಸದಸ್ಯರುಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ – ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ,ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಈ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ನಿಂದ ಹಾಗೂ ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಇದೀಗ ಧರ್ಮಸ್ಥಳ ಗ್ರಾಮದಲ್ಲಿ ೧೦೦ ಕ್ಕೂ ಹೆಚ್ಚು ಮಂದಿ ಕೊರೋನಾ ರೋಗಿಗಳಿದ್ದು ಜನರು ಎಚ್ಚರಿಕೆ ವಹಿಸುವಂತೆ ಹಾಗೂ ಸಾಧ್ಯವಾದಷ್ಟು ಮನೆಗಳಲ್ಲಿಯೇ ಇದ್ದು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಗ್ರಾಮಪಂಚಾಯತು ಆಡಳಿತ ಸೂಚಿಸಿದೆ.