ಕೊರೋನಾ ಪ್ಯಾಕೇಜ್‍ಗಾಗಿ ಜೂ. 3ರಂದು ಅತಿಥಿ ಉಪನ್ಯಾಸಕರಿಂದ ಆನ್‍ಲೈನ್ ಪ್ರತಿಭಟನೆ

ಕಲಬುರಗಿ,ಮೇ.29: ಕೊರೋನಾ ಪ್ಯಾಕೇಜ್‍ಗಾಗಿ ರಾಜ್ಯಾದ್ಯಂತ ಜೂನ್ 3ರಂದು ಅತಿಥಿ ಉಪನ್ಯಾಸಕರು ಆನ್‍ಲೈನ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ ಅವರು ತಿಳಿಸಿದ್ದಾರೆ.
ರಾಜ್ಯದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14447 ಅತಿಥಿ ಉಪನ್ಯಾಸಕರು ಕೋವಿಡ್-19ರ 2ನೇ ಅಲೆಯ ಲಾಕ್‍ಡೌನ್‍ನಿಂದಾಗಿ ಮತ್ತೆ ಪರದಾಡುವಂತಾಗಿದೆ. ಸರ್ಕಾರ ತುಂಬಾ ಹಗ್ಗಜಗ್ಗಾಟ ನಡೆಸಿ ಅವರಿಗೆ ಮತ್ತೇ ಕೆಲಸಕ್ಕೆ ಸೇರಿಸಿಕೊಂಡಿತ್ತು. ಆದರೆ ಈಗ ಲಾಕ್‍ಡೌನ್‍ನಿಂದಾಗಿ ಮತ್ತೆ ಅವರ ಜೀವನ ಅತಂತ್ರವಾಗಿದೆ ಎಂದು ಅವರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಉನ್ನತ ಶಿಕ್ಷಣ ಇಲಾಖೆ ಆನ್ಲೈನ್ ತರಗತಿಗಳಿಗೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗೂ ಹಲವು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕರೋನಾ ಅವಧಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕರೊನಾದಿಂದಾಗಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನಿಧಿ ಒದಗಿಸಿಲ್ಲ. ಹಾಗೂ ಅತಿಥಿ ಉಪನ್ಯಾಸಕರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಸೇವಾ ಭದ್ರತೆ ಖಾತ್ರಿಪಡಿಸಿಲ್ಲ. ಇದು ಸರ್ಕಾರದ ಅತ್ಯಂತ ನಿರ್ಲಕ್ಷ ಧೋರೆಣೆಯಾಗಿದೆ. ಇದರಿಂದಾಗಿ ಅವರ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಕೊರೋನಾ ಪ್ಯಾಕೇಜ್ ಘೋಷಣೆ ಮಾಡುವಂತೆ, ಕೊರೋನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ, ಈಗ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಈ ಹಿಂದೆ ನೇಮಿಸಿದ್ದ ಎಲ್ಲ ಉಪನ್ಯಾಸಕರನ್ನೂ ನಿಯೋಜಿಸುವಂತೆ, ಅತಿಥಿ ಉಪನ್ಯಾಸಕರ ಸೇವಾಭದ್ರತೆ ಖಾತ್ರಿಪಡಿಸುವಂತೆ ಒತ್ತಾಯಿಸಿ ಜೂನ್ 3ರಂದು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಆನ್ಲೈಲ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಲ್ಲ ಜಿಲ್ಲೆ ಹಾಗೂ ತಾಲೂಕಿನ ಅತಿಥಿ ಉಪನ್ಯಾಸಕರು ಭಾಗವಹಿಸಿಬೇಕು. ಬೇಡಿಕೆಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ಭಾವಚಿತ್ರ ತೆಗೆದುಕೊಂಡು ಹೋರಾಟ ಸಮಿತಿ ನಾಯಕರ ಮೊಬೈಲ್ ನಂ. 9538628531ಗೆ ಕಳಿಸಿ ಹಾಗೂ ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.