ಕೊರೋನಾ ಪರಿಸ್ಥಿತಿ ಮೆಟ್ಟಿ ನಿಂತು ಫಲಿತಾಂಶ ಸುಧಾರಿಸಿಕೊಳ್ಳಿ: ವೆಂಕಮನಿ ಸಲಹೆ

ಯಾದಗಿರಿ;ಜ.2: ಕರ್ನಾಟಕ ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಶುಕ್ರವಾರದಿಂದ ರಾಜ್ಯದ ಪದವಿಪೂರ್ವ ಕಾಲೇಜುಗಳು ಪುನಾರಂಭವಾಗುತ್ತಿವೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳು ಪಾಲಿಸುತ್ತಾ ಕೊರೊನಾ ಮೆಟ್ಟಿನಿಂತು ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿ ಫಲಿತಾಂಶವನ್ನು ಸುಧಾರಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಯಾದಗಿರಿ ಕಛೇರಿ ಅಧೀಕ್ಷಕರಾದ ಚಂದ್ರಕಾಂತ ವೆಂಕಮನಿ ಕಿವಿಮಾತು ಹೇಳಿದರು.
ಸ್ಥಳೀಯ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ತರಗತಿಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೋನಾ ಮಹಾಮಾರಿ ಯಿಂದಾಗಿ ಹಲವಾರು ತಿಂಗಳುಗಳಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿರುವುದನ್ನು ಅರಿತು ಇಲಾಖೆ ಆನ್ಲೈನ್ ಪಾಠಗಳನ್ನು ಆರಂಭಿಸಿತ್ತು .ಪ್ರಸ್ತುತ ಶಾಲಾ ಕಾಲೇಜುಗಳನ್ನು ಆರಂಭ ಮಾಡಿ ಅವರ ಭವಿಷ್ಯತ್ತಿನ ನಿರ್ಮಾಣಕ್ಕೆ ಪ್ರಯತ್ನಿಸಿದೆ ಇದರ ಸೌಲಭ್ಯವನ್ನು ಪಡೆಯಬೇಕು.
ಅಧ್ಯಯನವೊಂದು ಪ್ರಕ್ರಿಯೆ ನಿರಂತರ ಪ್ರಕ್ರಿಯೆಯಾಗಿದ್ದು ಸತತ ಪರಿಶ್ರಮದೊಂದಿಗೆ ಯಶಸ್ಸನ್ನು ಪಡೆಯವದರ ಮೂಲಕ ವಿದ್ಯಾರ್ಥಿಗಳು ಜಿಲ್ಲೆಯ ಫಲಿತಾಂಶವನ್ನು ಸುಧಾರಿಸುವಲ್ಲಿ ಯತ್ನಿಸಬೇಕು ಎಂದು ನುಡಿದರು.
ಸಮಾರಂಭದಲ್ಲಿ ಉಪನ್ಯಾಸಕ ರಘುನಾಥರೆಡ್ಡಿ, ಕಚೇರಿ ಸಹಾಯಕ ಗೌರಿಶಂಕರ್ ಹಿರೇಮಠ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವೆಂಕಟರಾವ ಕುಲಕರ್ಣಿಯವರು ಕಛೇರಿ ಅಧೀಕ್ಷಕರಾದ ಚಂದ್ರಕಾಂತ ವೆಂಕಮನೆಯವರನ್ನು ಸನ್ಮಾನಿಸಿ ಮಾತನಾಡುತ್ತಾ ಕಾಲೇಜಿನ ದೈನಂದಿನ ಪಾಠಗಳ ಲಾಭವನ್ನು ಪಡೆದು ಕೋವಿಡ್ -19 ರ ನಿಯಮಗಳನ್ನು ಅನುಸರಿಸುತ್ತಾ ನಿರಂತರ ಅಧ್ಯಯನದಲ್ಲಿ ತೊಡಗಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀಶೈಲ ಜಿ, ಶಾಮರಾವ್ ಪಾಟೀಲ್, ರಾಘವೇಂದ್ರ ರೆಡ್ಡಿ, ರೀನಾವತಿ, ಗಿರಿಜಾ ಹಿರೇಮಠ್ ಸೇರಿದಂತೆ ಕಾಲೇಜಿನ 32 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಮಲ್ಲಿಕಾರ್ಜುನ ಅಂಗಡಿ ನಿರೂಪಿಸಿದರು ಉಪನ್ಯಾಸಕ ಪ್ರಕಾಶ ರೆಡ್ಡಿ ಪ್ರಾರ್ಥಿಸಿದರು. ಅಶೋಕ ಆವಂಟಿ ವಂದಿಸಿದರು.