ಕೊರೋನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲ : ಕಾಂಗ್ರೆಸ್ ಆರೋಪ

ಕಲಬುರಗಿ ಏ 16: ಕೊರೋನಾ ಎರಡನೆಯ ಅಲೆ ಸುನಾಮಿಯಂತೆ ಅಪ್ಪಳಿಸಿದೆ.ಆದರೆ ಜಿಲ್ಲಾಡಳಿತ ಕೊರೋನಾ ನಿರ್ವಹಣೆಯಲ್ಲಿ ಸೋತು ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಕಾಂಗ್ರೆಸ್ ನಾಯಕರು,ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಜಿಲ್ಲಾಡಳಿತಕ್ಕೆ, ಒಟ್ಟಾರೆ ಸರ್ಕಾರಕ್ಕೆ ಮುಂಗಡ ಯೋಜನೆ ಎಂಬುದೇ ಇಲ್ಲ.ಕೊರೋನಾ ಪ್ರಕರಣಗಳು ಉಲ್ಬಣಿಸುತ್ತಿವೆ.ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.ಜನ ಆತಂಕದಲ್ಲಿದ್ದಾರೆ.ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಇದೆ.ಸಾಕಷ್ಟು ಸಿಬ್ಬಂದಿ ಇಲ್ಲ.ಅಂಬ್ಯುಲೆನ್ಸ್ ಸಾಕಾಗುತ್ತಿಲ್ಲ.ದಿಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಸರಕಾರ ಮೀನಮೇಷ ಎಣಿಸುತ್ತಿದೆ.ನೀವು ಸರಕಾರ ನಡೆಸುತ್ತಿದ್ದೀರಾ ? ಅಥವಾ ನಾಟಕ ಕಂಪನಿಯಾ ? ಎಂದು ಛೇಡಿಸಿದರು.
ಗಟ್ಟಿ ನಿರ್ಧಾರಕ್ಕೆ ಬನ್ನಿ:
ಜನ ಮಾಸ್ಕ್ ಹಾಕದಿದ್ದರೆ ದಂಡ ವಸೂಲಿ ಮಾಡುವ ಕ್ರಮ ಕಠಿಣಗೊಳಿಸಿ.ಜನ ಸೇರುವ ರಾಜಕೀಯ ಇತ್ಯಾದಿ ಸಭೆ ಸಮಾರಂಭ ನಿಷೇಧಿಸಿ.ಲಾಕ್‍ಡೌನ್ ಮಾಡೋ ವಿಚಾರ ಆಡಳಿತದಲ್ಲಿರುವ ನಿಮಗೆ ಸಂಬಂಧಿಸಿದ್ದು,ನಾವು ರಾಜಕೀಯ ಮಾಡಲ್ಲ.ಸಾರ್ವಜನಿಕ ಹಿತಾಸಕ್ತಿ ಮುಖ್ಯ .ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೊರೋನಾ ನಿರ್ವಹಣೆಗೆ ಮುಂದಾಗಿ ಜನರ ಜೀವ ಉಳಿಸಬೇಕು ಎಂದರು.
ಹೆಣದ ಮೇಲೆ ಹಣ ಮಾಡ್ಬೇಡಿ:
ಕೊರೋನಾ ಎರಡನೆಯ ಅಲೆಯಲ್ಲಾದರೂ ಹೆಣದ ಮೇಲೆ ಹಣ ಮಾಡ್ಬೇಡಿ ಎಂದು ಹೇಳುವ ಮೂಲಕ, ಕೊರೋನಾ ಮೊದಲ ಅಲೆಯ ನಿರ್ವಹಣೆಯಲ್ಲಿ ಸರಕಾರದಿಂದ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ನೇರ ಆರೋಪ ಮಾಡಿದರು. ನಿಮಗೆ ಕಮಿಷನ್ ಬೇಕಾದರೆ ನಾವು ಭಿಕ್ಷೆ ಎತ್ತಿಯಾದರೂ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.
ಸರಕಾರ ಮನಿ ಮೇಕಿಂಗ್ ಮಶೀನ್ ಆಗಿದೆ ಎಂದು ದೂರಿದ ಅವರು ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರದೇ ಪಕ್ಷದ ಕೆ.ಎಸ್ ಈಶ್ವರಪ್ಪ ,ಬಸವನಗೌಡ ಪಾಟೀಲ ಯತ್ನಾಳ ಹೇಳುತ್ತಿದ್ದಾರೆ.ಹೀಗಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಹೇಳುವದು ಏನೂ ಉಳಿದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಗದೇವ ಗುತ್ತೇದಾರ,ಭೀಮಣ್ಣ ಸಾಲಿ,ಸುಭಾಷ ರಾಠೋಡ ಸೇರಿದಂತೆ ಹಲವರಿದ್ದರು.