ಕೊರೋನಾ ನಿಯಂತ್ರಣವಾಗುವ ವರೆಗೆ ತಂಬಾಕು, ಉತ್ಪನ್ನ ನಿಷೇಧಿಸಲು ಆಗ್ರಹ

ಯಾದಗಿರಿ:ಎ.20: ಕೊರೋನಾ ನಿಯಂತ್ರಣವಾಗುವ ವರೆಗೆ ಪಾನ ಮಸಾಲಾ ಗುಠಕಾ ದಂತಹ ವಸ್ತುಗಳ ಮಿತಿಮೀರಿದ ಮಾರಾಟದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಟಕಾ ಸಂಬಂಧಿತ ವಸ್ತುಗಳ ಮಾರಾಟಕ್ಕೆ ನಿಷೇಧ ಹೇರುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ನಗರ ಘಟಕದ ಅಧ್ಯಕ್ಷ ಅಂಬರೇಷ ಹತ್ತಿಮನಿ, ಕೊರೊನಾ ಹಬ್ಬುವಿಕೆ ಹೆಚ್ಚಳವಾಗುತ್ತಿದ್ದುದು ಒಂದು ಕಡೆಯಾದರೆ ಗುಟಕಾ ಪಾನ ಮಸಾಲ, ಖೈನಿ, ಜರ್ದಾಗಳ ಜಗಿಯುವುದು ಎಗ್ಗಿಲ್ಲದೇ ನಡೆಯುತ್ತಿದ್ದು, ಇದನ್ನು ಸೇವಿಸುವವರು ಎಲ್ಲೆಂದರೆಲ್ಲೆ ಉಗುಳುವುದು ನಡೆದಿದೆ. ಇದರಿಂದ ಸಾಂಕ್ರಾಮಿಕ ತೀವ್ರವಾಗಿ ಹರುಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಕೂಡಲೇ ಇವುಗಳ ನಿಷೇಧಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೊದಲೇ ಸಾಂಕ್ರಾಮಿಕ ರೋಗ ತೀವ್ರವಾಗಿ ಹರುಡುತ್ತಿರುವ ವೇಳೆ ಗುಟಕಾ ಜರ್ದಾ ಖೈನಿ ತಿಂದು ಉಗುಳುವುದು, ಮತ್ತು ಒಂದೇ ಸಿಗರೇಟ ಹೊಗೆಯನ್ನು 4-5 ಜನ ಸೇವಿಸುವ ದುಶ್ಚಟಕ್ಕೆ ಬಿದ್ದಿರುವ ಯುವ ಜನತೆಯ ಬೇಜವಬ್ದಾರಿ ನಡೆಯಿಂದಾಗಿ ಸಾಂಕ್ರಾಮಿಕ ಹರಡುವ ಭೀತಿ ಹೆಚ್ಚಳ ಮೂಡಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ವೇಳೆ ಜಿಲ್ಲಾಡಳಿತ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮವಾಗಿ ಈ ತಂಬಾಕು ವಸ್ತುಗಳ ಉತ್ಪನ್ನಗಳ ನಿಷೇಧಕ್ಕೆ ತಕ್ಷಣ ಮುಂದಾಗಬೇಕೆಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಅಂಬುರಾಜ್ ನಾಯಕ, ಕಾಶಿನಾಥ ನಾನೇಕ, ಸಿದ್ದಪ್ಪ ಕ್ಯಾಸಪನಳ್ಳಿ, ರಿಯಾಜ್ ಪಟೇಲ್, ಸಾಹೇಬಗೌಡ ನಾಯಕ, ಸಿದ್ದಪ್ಪ ಕೂಲೂರು, ಅರ್ಜುನ ಪವಾರ್, ಅಬ್ದುಲ್ ಚಿಗಾನೂರು ಇನ್ನಿತರರು ಆಗ್ರಹಿಸಿದ್ದು, ಕ್ರಮ ಕೈಗೊಳ್ಳದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.