ಕೊರೋನಾ ತಾಣವಾದ ಚೌಡಸಮುದ್ರ ಗ್ರಾಮ

ಕೆ.ಆರ್.ಪೇಟೆ.ಮೇ.01: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚೌಡಸಮುದ್ರ ಗ್ರಾಮದಲ್ಲಿ 30 ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ತಾಲ್ಲೂಕಿನಲ್ಲಿ ಅತ್ಯಧಿಕ ಕೊರೋನಾ ರೋಗಿಗಳಿರುವ ತಾಣವಾಗಿ ಮಾರ್ಪಟ್ಟಿದೆ.
ಚೌಡಸಮುದ್ರ 934 ಜನಸಂಖ್ಯೆ ಇರುವ ಗ್ರಾಮವಾಗಿದ್ದು ಕಳೆದ 2 ದಿನಗಳ ಹಿಂದೆ ಗ್ರಾಮದ ಕೆಲವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಪಾಸಿಟಿವ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಾ ಹೋದ ಪರಿಣಾಮ ಗ್ರಾಮದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಒಟ್ಟು 30 ಜನರಿಗೆ ಕೊರೋನಾ ಮಹಾಮಾರಿ ವಕ್ಕರಿಸಿರುವುದು ದೃಢಪಟ್ಟಿದ್ದು ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್‍ಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಪರೀಕ್ಷೆ ಮಾಡಿಸಲು ಭಯಗೊಂಡ ಜನತೆ
ಮಹಾಮಾರಿಯು ಗ್ರಾಮದ ಹಲವಾರು ಜನರಿಗೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲು ಜನರು ಭಯಭೀತರಾಗಿದ್ದರು. ಬೆಳಿಗ್ಗೆಯೇ ಎದ್ದು ತಮ್ಮ ರಮ್ಮ ಜಮೀನಿನ ಬಳಿಗೆ ಹೋಗಿ ಕೆಲಸದಲ್ಲಿ ತಲ್ಲೀನರಾಗಿ ಸಂಜೇಯ ವೇಳೆಗೆ ಮನೆಗೆ ಬರುತ್ತಿದ್ದರು. ಇದರಿಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಹರಸಾಹಸ ಪಡಬೇಕಾಯಿತು. ಕೊನೆಗೂ ಪೊಲೀಸ್ ಸಹಕಾರದಿಂದ ಆಂಬುಲೆನ್ಸ್ ಕರೆಯಿಸಿ ಅವರುಗಳನ್ನು ಪಟ್ಟಣಕ್ಕೆ ಕರೆತಂದು ಕೋವಿಡ್ ಪರೀಕ್ಷೆ ಮಾಡಿಸಲಾಯಿತು.
ಗ್ರಾಮದಲ್ಲಿ ಅತೀ ಹೆಚ್ಚು ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಬೀದಿಗಳಿಗೂ ಬೀರವಳ್ಳಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಾಣಿ ನೇತೃತ್ವದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು. ಡಾ.ಪುನೀತ್ ಗ್ರಾಮದ ಜನರಿಗೆ ಧೈರ್ಯತುಂಬುವ ಕೆಲಸ ಮಾಡುತ್ತಿದ್ದಾರೆ. ಗ್ರಾಮಕ್ಕೆ ಬೆಂಗಳೂರು ಬಾಂಬೆ ಮಯಂತಾದ ಕಡೆಗಳಿಂದ ಯಾವುದೇ ಜನ ಬಂದಿರುವುದಿಲ್ಲ ಆದರೂ ಸೋಂಕು ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲು ಕಾರಣ ಗ್ರಾಮದ ಜನರು ಸಾಮಾಜಿಕ ಅಂತರ ಪಾಲಿಸದಿರುವುದು ಹಾಗೂ ಮಾಸ್ಕ್ ಧರಿಸದೇ ಇರುವುದು ಕಾರಣ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಮೂರು ಸಾವು 53 ಪಾಸಿಟಿವ್
ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರುಗಳ ಸಾವಿನ ಪ್ರಮಾಣ ಶುಕ್ರವಾರವೂ ಮುಂದುವರಿದಿದ್ದು ಹಿರಿಕಳಲೆ ಗ್ರಾಮದ ಒಬ್ಬರು, ಕೆ.ಆರ್.ಪೇಟೆ ಪಟ್ಟಣದ ಒಬ್ಬರು ಹಾಗೂ ಬಿಲ್ಲೇನಹಳ್ಳಿ ಗ್ರಾಮದ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದು 53 ಪಾಸಿಟಿವ್ ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಮೂಲಗಳು ತಿಳಿಸಿವೆ.