ಕೊರೋನಾ ತವರೂರಾಯ್ತಾ ಗಲಗ?

ದೇವದುರ್ಗ.ಮೇ.೧೫-ತಾಲೂಕಿನ ಗಲಗ ಗ್ರಾಮ ಅಕ್ಷರಶಃ ನರಕದಂತಾಗಿದ್ದು, ಸಾಂಕ್ರಾಮಿಕ ರೋಗದ ಜತೆ ಮಹಾಮಾರಿ ಕೊರೋನಾ ಎರಡನೇ ಅಲೆ ಗ್ರಾಮಸ್ಥರ ಜೀವ ಹಿಂಡುತ್ತಿದೆ.
ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿರುವ ಗಲಗ ಗ್ರಾಪಂಯಲ್ಲಿ ತಾಂಡಾ ದೊಡ್ಡಿ ಸೇರಿ ಐದು ಗ್ರಾಮಗಳು ಒಳಗೊಂಡಿದೆ.
ಪುಣೆ, ಗೋವಾ, ಮುಂಬೈ, ಬೆಂಗಳೂರಗೆ ಗುಳೆ ಹೋಗಿದ್ದ ಜನರು ಮರಳಿ ಬಂದಿದ್ದು, ಕೊರೋನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಇವರೆಗೆ ಸೋಂಕಿತರ ಸಂಖ್ಯೆ ೧೦೦ ಸಮೀಪಿಸಿದ್ದು, ಮೂವರನ್ನು ಬಲಿ ಪಡೆದಿದೆ.
ಗಲಗ ಗ್ರಾಮದಲ್ಲಿ ಇಬ್ಬರು, ದೇವರಗುಡ್ಡ ಗ್ರಾಮದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬ ಶಿಕ್ಷಕರು ರಾಯಚೂರು ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲೇ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದ ಗ್ರಾಮಕ್ಕೆ ಕೋವಿಡ್ ೧೯ ಗಾಯದ ಮೇಲೆ ಬರೆ ಹಾಕಿದೆ. ನಾಲ್ಕು ಖಾಸಗಿ ಆಸ್ಪತ್ರೆಗಳು ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ನಾನಾ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಗ್ರಾಮದ ಹೊರವಲಯದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದರೂ ತಜ್ಞ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಇಲ್ಲದೆ ನರಳುತ್ತಿದೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಹಾಗೂ ಸಲಹೆ ನೀಡದ ಕಾರಣ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಿರ್ಲಕ್ಷ್ಯ ಮಾಡಿದರೆ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ರೋಗದ ತವರು ಮನೆ
ಗಲಗ ಗ್ರಾಮ ಬಸ್ ನಿಲ್ದಾಣದಿಂದ ಗುಡ್ಡದ ಮೇಲಿನ ಚನ್ನಬಸವ ದೇವಸ್ಥಾನವರೆಗೆ ಸುಮಾರು ಎರಡು ಕಿಮೀ ಉದ್ದವಿದ್ದು ಸುತ್ತಲೂ ಗುಡ್ಡಗಳು ಆವರಿಸಿಕೊಂಡಿವೆ. ಗ್ರಾಮದ ಮಧ್ಯೆ ಹಳ್ಳದಂತೆ ದೊಡ್ಡ ಚರಂಡಿ ಹರಿಯುತ್ತಿದೆ. ಸ್ವಲ್ಪ ಮಳೆ ಬಂದರೂ ಊರು ಕೆಸರು ಮಾಯವಾಗುತ್ತೆ. ಸಿಸಿ ರಸ್ತೆ, ಒಳಚರಂಡಿ ವ್ಯವಸ್ಥೆ ಮರಿಚೀಕೆಯಾಗಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿವೆ. ವಿಪರೀತ ಸೊಳ್ಳೆ, ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಚಿಕೂನ್ ಗೂನ್ಯ, ಡೆಂಫ್ಯೂ ತಾಲೂಕಿನಲ್ಲಿ ಇದೇ ಗ್ರಾಮದಲ್ಲಿ ಮೊದಲು ಕಾಣಿಸಿಕೂಳ್ಳುತ್ತವೆ. ಫಾಗಿಂಗ್ ಸಿಂಪಡಿಸಲು ಗ್ರಾಪಂ ಮರೆತಿದೆ. ಗ್ರಾಮದ ಪ್ರಜ್ಞಾವಂತ ಯುವಕರ ಬಳಗ ಆಗಾಗ ಸ್ವಚ್ಛತೆ ಕಾರ್ಯ ಕೈಗೊಂಡು ಜನರಿಗೆ ಮಾಸ್ಕ್, ಸೈನಿಟೈಸರ್ ವಿತರಿಸಿ ಜಾಗೃತಿ ಮೂಡಿಸಿದೆ. ಇದು ಹೊರತು ಪಡಿಸಿ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ಕೋಟ್……

ಗಲಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಇದ್ದಾರೆ. ಗ್ರಾಮ ಕಾಂಪ್ಲಿಕೇಟೆಡ್ ಏರಿಯಾ ಆದ ಕಾರಣ ತಜ್ಞ ವೈದ್ಯರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ, ಕರೊನಾ ಸೋಕಿತರು ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು.