ಕೊರೋನಾ ಕಟ್ಟುಪಾಡಿಗೆ ಒಳಗಾಗುವಂತೆ ಮಾಡುತ್ತಿದೆ

ಚಿತ್ರದುರ್ಗ, ಮೇ 5 – ಜಗತ್ತು ಮತ್ತು ಜೀವನ ಅತ್ಯಂತ ಸಂದಿಗ್ಧ ಮತ್ತು ಸಂಕೀರ್ಣ ಸ್ಥಿತಿಯನ್ನು ತಲುಪುತ್ತಿದೆ. ಕಣ್ಣಿಗೆ ಕಾಣದಿರುವ ವೈರಾಣು ಜಗತ್ತಿನಲ್ಲಿ ಎಲ್ಲರ ಬದುಕಿನಲ್ಲಿ ತಳಮಳವನ್ನು ಉಂಟುಮಾಡಿದೆ. ಯಾವಾಗ, ಯಾರಿಗೆ ಬರುತ್ತದೆಯೋ ಹೇಳಲು ಬರುವುದಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತೊಂದನೇ ವರ್ಷ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಹೀಗೆ ಆಗುತ್ತದೆಂದು ಹೇಳಲು ಸಾಧ್ಯವಿಲ್ಲ. ಜಗತ್ತನ್ನು ಮೀರಿದ ಧರ್ಮ ಒಂದಿದೆ. ಅದು ಕಾಲಧರ್ಮ. ಮಾನವ ಬದುಕಿಗೆ ಹಲವಾರು ಕಟ್ಟುಪಾಡುಗಳಿವೆ. ಮಾನವನ ಬದುಕಿಗೆ ಕೊರೋನಾ ಎನ್ನುವುದು ಕಟ್ಟುಪಾಡಿಗೆ ಒಳಗು ಮಾಡುತ್ತಿದೆ. ಇದು ಯಾವಾಗ ಬರುತ್ತದೆ ಎಂದು ಗೊತ್ತಿರಲಿಲ್ಲ. ಜನನ ಹೇಳಿ ಕೇಳಿ ಬರುತ್ತದೆ. ಆದರೆ ಮರಣ ಯಾರನ್ನೂ ಹೇಳುವುದಿಲ್ಲ ಕೇಳುವುದಿಲ್ಲ. ಜಗತ್ತಿನಲ್ಲಿ ಎಲ್ಲ ಜೀವರಾಶಿಗಳು ಸಂತಾನ ಉತ್ಪತ್ತಿ ಮಾಡುತ್ತವೆ. ಸಂತಾನದ ಅಭಿವೃದ್ಧಿಗಾಗಿ ಕಲ್ಯಾಣದ ಪ್ರಕ್ರಿಯೆ ನಡೆಯುತ್ತಿದೆ. ಬೌದ್ಧಿಕವಾಗಿ, ಹಾರ್ದಿಕವಾಗಿ ನಾವು ನಡೆಸಿಕೊಂಡು ಹೋಗಬೇಕಿದೆ. ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಜನಗಳಿಗೆ ಅನುಕೂಲವಾಗಲೆಂದು ಒಂದು ಯೋಜನೆ ಹಾಕಿಕೊಂಡೆವು. ಅದುವೆ ಸರ್ವಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ. ಮುರುಘಾ ಮಠದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ. ಕಾರಣ ಇದಕ್ಕೆ ಒಂದು ಬದ್ಧತೆ ಮತ್ತು ಪ್ರಬುದ್ಧತೆ ಇದೆ. ಇದೊಂದು ತಪೋಭೂಮಿ.ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಳ್ಳಿ. ಪ್ರತಿಯೊಬ್ಬರು ಮಾಸ್ಕನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಸುರಕ್ಷಿತವಾಗಿರಬೇಕು. ಕೊರೋನಾ ಕಾಯಿಲೆ ಬಗ್ಗೆ ಎಚ್ಚರವಿರಲಿ. ಭಯ ಬೇಡ ಎಂದು ತಿಳಿಸಿದರು.ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಮಾತನಾಡಿ, ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ 31ವರ್ಷಗಳಿಂದ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಮನೆಯಲ್ಲಿ ಮದ್ದು ಮಾಡಿಕೊಂಡು ಕೊರೋನಾ ರೋಗ ಬರದಂತೆ ನೋಡಿಕೊಳ್ಳಬೇಕು. ಅರಿಶಿನ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ತುಳಸಿ ಮೊದಲಾದುವನ್ನು ಸೇವಿಸಬೇಕು. ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ರೋಗದಿಂದ ನಾವು ದೂರವಿರಬೇಕು. ನಮ್ಮ ಹಿರಿಯರು ಇಂತಹ ಗಿಡಮೂಲಿಕೆಗಳ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂದರು.ಕಾರ್ಯಕ್ರಮದಲ್ಲಿ 12 ಜೋಡಿಗಳ ವಿವಾಹ ನೆರವೇರಿತು. ಶ್ರೀಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಸರ್ಕಾರ ನಿಗದಿಪಡಿಸಿರುವ ಕೊರೋನಾ ನಿಯಮಗಳನ್ನು ಪಾಲಿಸಲಾಯಿತು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿದರು.