ಕೊರೋನಾ ಓಡಿಸಿ ಮಕ್ಕಳನ್ನು ಓದಿಸಿ -ಸಚಿನ್ ಕುಮಾರ.

ಕೂಡ್ಲಿಗಿ. ಜ.2 :- ಮಹಾಮಾರಿ ಕೊರೋನಾ ಓಡಿಸೋಣ ಮಕ್ಕಳನ್ನು ಓದಿಸೋಣ ಎಂಬ ವಾಕ್ಯವನ್ನು ಪಾಲಕರು ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು ಎಂದು ಪಟ್ಟಣಪಂಚಾಯತಿ ಸದಸ್ಯ ಕೆ ಎಚ್ ಎಂ ಸಚಿನ್ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದ ಕೊರಖಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶಾಲೆಗೆ ಬರುವಿಕೆಯ ಸ್ವಾಗತ ಹಾಗೂ ಹೊಸವರ್ಷದ ಶುಭಾಶಯ ಕೋರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಮಹಾಮಾರಿ ಕೊರೋನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು ಹಂತ ಹಂತವಾಗಿ ನಿಯಂತ್ರಣವಾಗುತ್ತಿದೆ ಎಂಬ ಅರೋಗ್ಯ ತಜ್ಞರ ಮಾಹಿತಿ ಆಧಾರಿಸಿ ಸರ್ಕಾರ ಶಾಲಾಕಾಲೇಜು ತೆರೆಯಲು 8ತಿಂಗಳ ನಂತರ ಅನುಮತಿ ನೀಡಿದ್ದು ಇಂದು ಶಾಲೆಯತ್ತ ಮಕ್ಕಳು ಬರುತ್ತಿದ್ದು ಆ ಮಕ್ಕಳಿಗೆ ಶಿಕ್ಷಕರು ಸ್ವಾಗತ ಕೋರುವ ಜೊತೆಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಮಕ್ಕಳು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಮಾಡಿದ ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ಮಾಡುವ ಮುಖ್ಯ ಜವಾಬ್ದಾರಿ ಶಿಕ್ಷಕರದ್ದಾಗಿದ್ದು ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕಾಪಾಡುವಂತೆ ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ಮತ್ತು ಶಾಲೆಗೆ ಬಂದ ವಿದ್ಯಾಗಮ ಮಕ್ಕಳಿಗೆ ಸದಸ್ಯ ಸಚಿನ್ ಕುಮಾರ್ ಸಿಹಿ ಹಂಚಿ ಸರ್ಕಾರದ ನಿಯಮ ಪಾಲಿಸಿಕೊಂಡು ಕೊರೋನಾ ಓಡಿಸಿ ಮಕ್ಕಳನ್ನು ಓದಿಸುವಲ್ಲಿ ಮುಂದಾಗುವಂತೆ ತಿಳಿಸಿದರು.