ಕೊರೋನಾ ಆರ್ಥಿಕ ಪ್ಯಾಕೇಜ್ ಕೇವಲ ಘೋಷಣೆಗೆ ಸೀಮಿತ


ಮಂಗಳೂರು, ಎ.೨೪- ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸರಕಾರ ಕಳೆದ ವರ್ಷ ಘೋಷಿಸಿದ್ದ ೨೦ ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಏನಾಯಿತು? ಯಾರಿಗೆ ಎಷ್ಟು ಪರಿಹಾರ ಸಿಕ್ಕಿದೆ. ಕೊರೋನದ ಆರ್ಥಿಕ ಪ್ಯಾಕೇಜ್ ಕೇವಲ ಘೋಷನೆಗೆ ಸೀಮಿತವಾಗಿತ್ತು ಎಂದು ಮಂಗಳೂರು ವಿಪಕ್ಷ ನಾಯಕ ಎ.ಸಿ.ವಿನಯರಾಜ್ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರು ಸರಿಯಾದ ಕೆಲಸವಿಲ್ಲದೆ, ವ್ಯಾಪಾರವಿಲ್ಲದೆ, ವಹಿವಾಟು ಮಾಡಲಾಗದೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನೂರಾರು ಸಣ್ಣ ಮತ್ತು ಮದ್ಯಮ ಹಾಗೂ ಹೊಟೇಲ್ ಉದ್ಯಮಗಳು ಮುಚ್ಚಿವೆ. ಎಷ್ಟೋ ಮಂದಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಬೋಟುಗಳು ಲಂಗರು ಹಾಕಿದ ಪರಿಣಾಮ ಮೀನುಗಾರರು ಸಂಕಷ್ಟ ದಲ್ಲಿದ್ದಾರೆ. ಈಗ ಕೊರೋನ ೨ನೆ ಅಲೆ ಶುರುವಾಗಿದೆ. ಅದನ್ನು ಮುನ್ನೆಚ್ಚರಿಕೆಯಿಂದ ನಿಗ್ರಹಿಸುವ ಬದಲು ಹಠಾತ್ ಆಗಿ ಅಘೋಷಿತ ಲಾಕ್‌ಡೌನ್ ಹೇರಿದೆ ಎಂದು ಆಪಾದಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ೬೫ ರೂ.ಗೆ. ೨೪ ಸಾವಿರ ಲೀಟರ್ ನೀರು ಸಿಗುತ್ತಿತ್ತು. ಆದರೆ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ೨೪ ಸಾವಿರ ಲೀ. ಬದಲು ೮ ಸಾವಿರ ಲೀ. ನೀಡುತ್ತಿರುವುದು ಗ್ರಾಹರಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಪಾಲಿಕೆಯಲ್ಲಿ ವಿಪಕ್ಷವು ಧ್ವನಿ ಎತ್ತಿದೆ. ಐದು ತಿಂಗಳಾದರೂ ಮನಪಾ ಆಡಳಿತ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ವಿನಯರಾಜ್ ಆಪಾದಿಸಿದರು. ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕೂಡ ಶೇ.೧೫ರಷ್ಟು ಹೆಚ್ಚಿಸಲಾಗಿದೆ. ಈಗಿನ ಹೊಸ ನೀತಿಯ ಪ್ರಕಾರ ಮನೆ/ವಾಣಿಜ್ಯ ಕಟ್ಟಡ ಇರುವ ಜಮೀನು ಬಿಟ್ಟು ಅಂಗಳಕ್ಕೆ ಕೂಡ ತೆರಿಗೆ ಪಾವತಿಸ ಬೇಕಾಗಿದೆ. ಚುನಾವಣೆ ಸಂಧರ್ಭ ಜನ ಸ್ನೇಹಿ ಆಡಳಿತ ಕೊಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಇದೀಗ ಜನರ ಸುಲಿಗೆಗೆ ಇಳಿದಿರುವುದು ವಿಪರ್ಯಾಸ ಎಂದರು. ಮನೆ ಕಟ್ಟಡ ಪರವಾನಗಿ ಶುಲ್ಕವನ್ನು ೩ ಪಟ್ಟು ಹೆಚ್ಚಿಸಲಾಗಿದೆ. ಅಲ್ಲದೆ ನೀರು ಸರಬರಾಜು ಶುಲ್ಕವನ್ನು ಹೆಚ್ಚುವರಿಯಾಗಿ ಅದರೊಂದಿಗೆ ಪಾವತಿ ಮಾಡಬೇಕಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಪೊರೇಟರ್‌ಗಳು, ಶಾಸಕರು ಮೌನ ವಹಿಸಿದ್ದಾರೆ. ಈಗಾಗಲೇ ಪೆಟ್ಟೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ತರಕಾರಿ, ಹಣ್ಣುಹಂಪಲು ಹಾಗೂ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿದೆ. ಈ ಮಧ್ಯೆ ಮನಪಾ ನೀರಿನ ಬಿಲ್ಲು, ಸ್ವಯಂ ಘೋಷಿತ ಆಸ್ತಿ ತೆರಿಗೆ, ಮನೆ ಕಟ್ಟಡ ಪರವಾನಗಿ ಏರಿಸಿರುವುದು ಜನ ವಿರೋಧಿ ನೀತಿಯಾಗಿದೆ. ಇದನ್ನು ಇಳಿಸದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.