ಕೊರೋನಾಪಾಸಿಟಿವ್ ಬಂದವರೆಲ್ಲ ರೋಗಿಗಳಲ್ಲ:ಡಾ.ಪಿ.ಎಸ್ ಶಂಕರ್

ಕಲಬುರಗಿ ಏ 19: ಕೊರೋನಾ ಪಾಸಿಟಿವ್ ಬಂದವರೆಲ್ಲ ರೋಗಿಗಳಲ್ಲ.ಸೌಮ್ಯ ರೋಗ ಲಕ್ಷಣಗಳಿದ್ದರೆ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು.ವೈದ್ಯರು ಸೂಚಿಸುವ ಔಷಧಿ ತೆಗೆದುಕೊಳ್ಳಬೇಕು.ಗಂಭೀರ ರೋಗ ಲಕ್ಷಣಗಳು ಪ್ರಕಟವಾದರೆ ಮಾತ್ರ ಆಸ್ಪತ್ರೆಯ ಚಿಕಿತ್ಸೆ ಅಗತ್ಯ ಎಂದು ನಾಡೋಜ ಡಾ. ಪಿ.ಎಸ್ ಶಂಕರ್ ಅವರು ಹೇಳಿದರು.ಅವರಿಂದು ಪತ್ರಿಕಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ವೈದ್ಯ ವಿಜ್ಞಾನ ಪರಿಷತ್ ಜಂಟಿಯಾಗಿ ಆಯೋಜಿಸಿದ ಕೊರೋನಾ ಎರಡನೆಯ ಅಲೆ ಎಂಬ ವಿಷಯವಾಗಿ ಏರ್ಪಡಿಸಿದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೂರು ಮಂತ್ರ:
ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿವೆ. ಮಾಸ್ಕ್ ಧರಿಸುವದು, ಸಾಮಾಜಿಕ ಅಂತರ ಮತ್ತು ಆಗಾಗ ಸೋಪಿನಿಂದ ಕೈ ತೊಳೆಯುವ ಮೂರು ಮುಖ್ಯ ಮಂತ್ರಗಳನ್ನು ಮನನ ಮಾಡಿಕೊಂಡರೆ ಕೊರೋನಾ ಹತ್ತಿರ ಸುಳಿಯುವದಿಲ್ಲ.ಕೊರೋನಾ ರಭಸವಾಗಿ ಹರಡಲು ನಾವೇ ಕಾರಣರಾಗುತ್ತಿದ್ದೇವೆ.ಜನಸಂದಣಿಯ ಜಾತ್ರೆ, ರಾಜಕೀಯ ಸಭೆ, ಮದುವೆ,ಉತ್ಸವ ಮುಂತಾದ ಕಡೆ ಸೇರುತ್ತ ಕೋರೋನಾ ಶೀಘ್ರವಾಗಿ ಹರಡಲು ಕಾರಣರಾಗುತ್ತಿದ್ದೇವೆ.ನಿಯಮಗಳನ್ನು ಮುರಿಯುವದರಲ್ಲಿ ಜನ ತುಂಬಾ ಆಸಕ್ತಿ ತೋರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ನಿಯಮ ಪಾಲಿಸುವವನಿಗೆ ಯಮನೂ ಅಂಜುತ್ತಾನೆ ಎಂಬ ನಾಣ್ಣುಡಿಯನ್ನು ಜ್ಞಾಪಿಸಿದರು.ರೆಮ್‍ಡೆಸಿವರ್ ಚುಚ್ಚುಮದ್ದು ರಾಮಬಾಣವೇನೂ ಅಲ್ಲ. ಇದೇ ರೀತಿಯ ಬೇರೆ ಚುಚ್ಚುಮದ್ದು ರೋಗ ಗುಣಪಡಿಸಲು 15 ದಿನ ತೆಗೆದುಕೊಡರೆ ಇದು 9 ದಿನ ತೆಗೆದುಕೊಳ್ಳಬಹುದು ಅಷ್ಟೆ.ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. 2 ಡೋಸ್ ಲಸಿಕೆ ತೆಗೆದುಕೊಂಡುವರಿಗೆ ಗರಿಷ್ಠ ಸುರಕ್ಷತೆ ದೊರೆಯಲಿದೆ.ಕೊರೋನಾ ಪರಿಸ್ಥಿತಿ ಉಲ್ಬಣಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಯುವ ಸಂಘಟನೆಗಳು ಜನರಿಗೆ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು .ಕಾರ್ಯಕ್ರಮದಲ್ಲಿ ಡಾ.ಎಸ್.ಎಸ್ ಗುಬ್ಬಿ, ಎಸ್.ಎಸ್ ಹಿರೇಮಠ,ಭವಾನಿಸಿಂಗ್ ಠಾಕೂರ, ದೇವೇಂದ್ರಪ್ಪ ಅವಂಟಿ ಸೇರಿದಂತೆ ಹಲವರು ಪಾಲ್ಗೊಂಡರು.
@@@

ಔಷಧಿ ನೇರವಾಗಿ ತಲುಪಲಿ:ಡಾ. ವಿಕ್ರಮ ಸಿದ್ಧಾರೆಡ್ಡಿ
ಕೊರೋನಾದಿಂದ ಬಾಧಿತರಾಗಿ ಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಔಷಧಿಮಾತ್ರೆ ನೇರವಾಗಿ ತಲುಪುವ ಆನ್‍ಲೈನ್ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸುವ ತುರ್ತು ಅಗತ್ಯ ಇದೆ ಎಂದು ನಗರದ ಯುನೈಟೆಡ್ ಆಸ್ಪತ್ರೆ ನಿರ್ದೇಶಕ ಡಾ. ವಿಕ್ರಮ ಸಿದ್ಧಾರೆಡ್ಡಿ ಅವರು ಹೇಳಿದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಮೊಬೈಲ್‍ಗೆ ಓಟಿಪಿ ಮುಖಾಂತರ ಅವರ ದಾಖಲೆಯನ್ನು ಖಚಿತಪಡಿಸಿಕೊಂಡು ಅಗತ್ಯ ಚುಚ್ಚುಮದ್ದು ಔಷಧಿ ತಲುಪುವ ವ್ಯವಸ್ಥೆಯಾಗಬೇಕು.ಇದರಿಂದ ಅಗತ್ಯ ಔಷಧಿಗಳ ಅಭಾವ ತಪ್ಪಿಸಬಹುದು.
ಮೆಡಿಕಲ್ ಆಕ್ಷಿಜನ್ ಉತ್ಪಾದನೆ ತೀವ್ರಗೊಳಿಸಲು ಸರಕಾರ ಮುಂದಡಿ ಇಡಬೇಕು ಎಂದರು.ಜನ ತಮ್ಮ ಜವಾಬ್ದಾರಿ ಅರಿತು ಮೂರು ನಿಯಮ ( ಮಾಸ್ಕ್ ಧರಿಸುವದು, ಸಾಮಾಜಿಕ ಅಂತರ ಮತ್ತು ಆಗಾಗ ಸೋಪಿನಿಂದ ಕೈ ತೊಳೆಯುವದು) ಪಾಲಿಸಿ ಕೊರೋನಾ ಹರಡದಂತೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು. ರೋಗ ಪ್ರಮಾಣ ಹೆಚ್ಚಾಗುತ್ತಿದೆ.ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಾಕಾಗುತ್ತಿಲ್ಲ.ಮುಂದೆ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುವ ಮುನ್ನ ಸರಕಾರ ಸಮರೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಬೇಕು.ಖಾಸಗಿ ವೈದ್ಯರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ರೂಪಿಸಬೇಕು ಎಂದು ಮನವಿ ಮಾಡಿದರು.