ಕೊರೋನಾದೊಂದಿಗೆ ಜಿಲ್ಲೆಗೆ ಮಳೆ ಕಂಟಕ: ಮುಳುಗಿದ ಮಳಖೇಡ್ ಸೇತುವೆ, ಹಲವು ಗ್ರಾಮಗಳು ಜಲಾವೃತ

ಕಲಬುರಗಿ,ಸೆ.16: ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ ಮುಂದುವರೆದಿದ್ದು, ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ. ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳು ಜಲಾವೃತಗೊಂಡು ನಡುಗಡ್ಡೆಯಂತಾಗಿವೆ. ಈ ಮಧ್ಯೆ, ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ್ ಗ್ರಾಮದ ಸಮೀಪ ಇರುವ ಕಾಗಿಣಾ ನದಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ವಾಗ್ದರ್ಗಿ- ರಿಬ್ಬನಪಲ್ಲಿ ಮಾರ್ಗ ಬಂದ್ ಆಗಿದೆ.
ಮಳಖೇಡ್ ಮಾರ್ಗ ಬಂದ್ ಆಗಿದ್ದರಿಂದ ಕಲಬುರಗಿ ಹಾಗೂ ಹೈದ್ರಾಬಾದ್‍ಗೆ ತೆರಳುತ್ತಿದ್ದ ನೂರಾರು ವಾಹನಗಳ ಸಂಚಾರಕ್ಕೆ ಭಾರೀ ವ್ಯತ್ಯಯವುಂಟಾಗಿದೆ. ಆದಾಗ್ಯೂ, ಪರ್ಯಾಯ ಮಾರ್ಗಗಳಿಗಾಗಿ ಕಂಗಾಲಾದ ವಾಹನ ಸವಾರರು ಹುಡುಕಾಡುತ್ತಿದ್ದಾರೆ.
ಸೇಡಂ ಅಕ್ಕ ಪಕ್ಕ ಎಂಟು ಕಾರ್ಖಾನೆಗಳಿರುವುದರಿಂದ ರಾತ್ರಿ, ಹಗಲು ಸಂಚರಿಸುವ ಮಾರ್ಗವಾಗಿದ್ದರಿಂದ ಸೇಡಂನಿಂದ ಕಲಬುರಗಿಗೆ ಹೋಗುವ ಮಧ್ಯದ ಹೂಡಾ (ಕೆ) ರಸ್ತೆಯಿಂದ ಮಳಖೇಡ್‍ವರೆಗೆ ಸರದಿ ಉದ್ದನೆಯ ಸಾಲಿನಲ್ಲಿ ಲಾರಿ, ಬಸ್ ಹಾಗೂ ವಿವಿಧ ವಾಹನಗಳು ನಿಂತವು. ಸಂಜೆ 4 ಗಂಟೆಗೆ ಪ್ರವಾಹ ಇಳಿಮುಖವಾಗುತ್ತಿದ್ದುದರಿಂದ ಪೋಲಿಸರು ದ್ವಿಚಕ್ರವಾಹನ ಸವಾರರಿಗೆ ಸಂಚರಿಸಲು ಬಿಟ್ಟರು.
ಧಾರಾಕಾರ ಮಳೆಗೆ ವಾಡಿ, ದೇವಾಪೂರ್, ಬಳವಾಡಗಿ, ಕೊಂಚೂರ್, ಹದನೂರ್ ಗ್ರಾಮಗಳ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಅನೇಕ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯಗಳು ಹಾಳಾಗಿವೆ. ಹಲವಾರು ಮನೆಗಳು ಜಖಂಗೊಂಡಿವೆ. ಅನೇಕ ಕುರಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಸೇಡಂ ಸಹಾಯಕ ಆಯುಕ್ತ ರಮೇಶ್ ಕೋಲಾರ್, ತಹಸಿಲ್ದಾರ್ ಉಮಾಕಾಂತ್ ಹಳ್ಳೆ, ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪಾ ಡಿಗ್ಗಿ, ಕಂದಾಯ ನಿರೀಕ್ಷಕ ದಶರಥ್ ಹಾಗೂ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲಿಸಿದರು.
ವರುಣನ ಆರ್ಭಟಕ್ಕೆ ಶಾಹಾಬಾದ್ ಹಾಗೂ ಸುತ್ತಮುತ್ತಲಿನ ರೈತರ ಹೊಲಗಳಿಗೆ ಕಾಗಿಣಾ ನದಿಯ ಪ್ರವಾಹದಿಂದ ಜಲಾವೃತಗೊಂಡಿವೆ. ಅನೇಕ ಮನೆಗಳಿಗೆ ನೀರು ನುಗ್ಗಿ ಅಗತ್ಯ ವಸ್ತುಗಳು ನೀರು ಪಾಲಾಗಿವೆ. ಹಾಜೀಪೀರ್ ದರ್ಗಾದ ಎದುರು ಇರುವ ಕಬ್ಬಿನ ಹೊಲ ಸಂಪೂರ್ಣ ಜಲಾವೃತಗೊಂಡಿದೆ. ರಸೆ ಸಂಪರ್ಕ ಕಡಿತಗೊಂಡಿದೆ. ಮಳೆಗೆ ಸೇಡಂ ತಾಲ್ಲೂಕಿನ ತೆಂಗಳಿ ಗ್ರಾಮವು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಲಾಗದೇ ಪರದಾಡಿದರು. ರಾವೂರ್ ಸಿದ್ದಲಿಂಗೇಶ್ವರ್ ಮಠಕ್ಕೂ ಮಳೆ ನೀರು ನುಗಿದ್ದು, ಮಠ ಸಂಪೂರ್ಣ ಜಲಾವೃತಗೊಂಡಿದೆ.
ಮಹಾಗಾಂವ್ ಸೇತುವೆ, ದಸ್ತಾಪೂರ್ ರಸ್ತೆ ಸೇತುವೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಕುರಿಕೋಟಾ ಪುನರ್ ವಸತಿ ಕೇಂದ್ರದಲ್ಲಿ ಮನೆಗಳ ಹಂಚಿಕೆ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿವಿಧ ಕಡೆಗೆ ಮನೆಗಳಿಗೆ ಹಾನಿಯಾಗಿದ್ದು, ಬೆಳೆಗಳೂ ಸಹ ಕೊಚ್ಚಿಹೋಗಿವೆ. ಸೆಪ್ಟೆಂಬರ್ 17ರಂದು ನಗರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಲಿದ್ದು, ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಸ್ಥಳೀಯವಾಗಿ ಲಭ್ಯವಿಲ್ಲ. ಆದಾಗ್ಯೂ, ಹಾನಿ ಕುರಿತು ಸಮೀಕ್ಷೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಿರಗಾಪೂರದಲ್ಲಿ ಈಗಾಗಲೇ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಶಾಸಕ ಮತ್ತಿಮೂಡ್ ಅವರು ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ನದಿ ತೀರದ ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿದೆ. ಚಿತ್ತಾಪೂರ್ ತಾಲ್ಲೂಕಿನ ಬಲವಾಡಗಿ, ಕಡಬೂರ್, ಚಾಮನೂರು ಜಲಾವೃತಗೊಂಡಿವೆ. ಕಾಗಿಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಅಕ್ಕ- ಪಕ್ಕದ ಗ್ರಾಮಗಳಿಗೆ ನೀರು ನುಗ್ಗಿದ್ದು, ಮನೆಗಳಲ್ಲಿದ್ದ ಧವಸ, ಧಾನ್ಯ ನೀರು ಪಾಲಾಗಿವೆ.
ಭಾರೀ ಮಳೆಯಿಂದಾಗಿ ಇಡೀ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿಯೂ ಸಹ ಹಲವು ಬಡಾವಣೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳಲ್ಲಿ ಜನರು ಇಡೀ ರಾತ್ರಿ ನಿದ್ರೆ ಮಾಡದೇ ಸಂಕಷ್ಟಕ್ಕೆ ಒಳಗಾದರು.
ಇದೇ ವೇಳೆ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿದೆ. ಕೋಟ್ಯಾಂತರ ರೂ.ಗಳ ಮೌಲ್ಯದ ಬೆಳೆ ಹಾನಿಯಾಗೋ ಭೀತಿ ಎದುರಾಗಿದೆ. ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಇನ್ನೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಳೆ ಮುಂದುವರೆಯುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.