ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ಮನವಿ

ದಾವಣಗೆರೆ.ಜೂ.೮ : ಮಾರಕ ಕೊರೋನಾ ವೈರಸ್ 2ನೇ ಅಲೆ ದೇಶಾದ್ಯಂತ ವ್ಯಾಪಿಸಿ ಸೋಂಕಿನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲೂ ಕೊರೋನಾದಿಂದ ದಿನೇ ದಿನೇ ಸಾವು ಸಂಭವಿಸುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪರಿಹಾರ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್. ತಿಮ್ಮಣ್ಣ ಒತ್ತಾಯಿಸಿದ್ದಾರೆ.ಈ ಹಿಂದೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸುಮಾರು ಜನರು ಸಾವನ್ನಪ್ಪಿದರು ಅವರ ಕುಟುಂಬ ವರ್ಗದವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿತು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ಆಗಬಾರದು. ರಾಜ್ಯದ ಎಲ್ಲ ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಇಂತಹ ಸಂದಿಗ್ಧ ಪರಿಸ್ಥಿತಿ ಕರ್ನಾಟಕದಲ್ಲಿ ಉಳ್ಳವರು, ಬಡವರು ಸಾವನ್ನಪ್ಪಿಸುತ್ತಿದ್ದಾರೆ. ಉಳ್ಳವರಿಗೆ ಹಣಕಾಸಿನ ಕೊರತೆ ಇರುವುದಿಲ್ಲ. ಆದರೆ ಬಡವರು ಎಲ್ಲಿ ಹೋಗಿ ಹಣ ತರಬೇಕು. ಮುಖ್ಯಮಂತ್ರಿಗಳು ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು  ಆಗ್ರಹಿಸಿದ್ದಾರೆ.