ಕೊರೋನಾದಿಂದ ದೂರ ಇರುವಂತೆ ಎಸ್ಸೆಸ್, ಎಸ್ಸೆಸ್ಸೆಂ ಮನವಿ

ದಾವಣಗೆರೆ.ಏ.೨೫; ಕೊರೋನಾದ 2ನೇ ಅಲೆ ತೀವ್ರವಾಗಿದ್ದು, ನಾಗರೀಕರು ಜೀವನಕ್ಕಿಂತ ಜೀವ ದೊಡ್ಡದು ಎಂಬುದನ್ನು ಅರಿತು ನಾಗರೀಕರು ಮನೆಯಲ್ಲೇ ಇದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಾಗೂ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಮನವಿ ಮಾಡಿದ್ದಾರೆ.ಜಿಲ್ಲಾಡಳಿತ ಕಠಿಣ ಕ್ರಮದ ಹೆಸರಿನಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ನಡೆದುಕೊಳ್ಳದೇ ಮಾರ್ಗಸೂಚಿ ಅನ್ವಯ ದುಡಿಮೆಗೆ ಅವಕಾಶ ನೀಡಬೇಕು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದು, ಈ ಅಂಗಡಿ-ಮುಗ್ಗಟ್ಟುಗಳಲ್ಲಿ ಕೆಲಸ ಮಾಡುವವರಿಗೆ ಜಿಲ್ಲಾಡಳಿತ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸರ್ಕಾರ ಜನರನ್ನು ತಪ್ಪಿತಸ್ಥರು ಎಂದು ಬಿಂಬಿಸದೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕೊರೋನಾದಿಂದ ಜೀವನಕ್ಕೆ ತೊಂದರೆ ಆಗಿರುವ ರೈತರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಮನೆ ಕೆಲಸಗಾರರು, ಟ್ಯಾಕ್ಸಿ ಚಾಲಕರು, ಹಮಾಲರು, ಮೆಕ್ಯಾನಿಕ್‍ಗಳು, ಸಣ್ಣ ಉದ್ದಿಮೆದಾರರು, ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಅಂಗಡಿಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಬಡವರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
ಅದೇ ರೀತಿ ಕಳೆದ ವರ್ಷ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ದಾವಣಗೆರೆಯ ಲಾಡ್ಜ್‍ಗಳಲ್ಲಿ ಐಸೋಲೇಷನ್ ಮಾಡಲಾಗಿದ್ದು, ಇದುವರೆಗೂ ಸಹ ಲಾಡ್ಜ್ ಮಾಲೀಕರಿಗೆ ಸರ್ಕಾರವೇ ನಿಗದಿಪಡಿಸಿದ್ದ ಬಾಡಿಗೆಯನ್ನು ಇದುವರೆಗೂ ಜಿಲ್ಲಾಡಳಿತ ಸಂದಾಯ ಮಾಡದೇ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳು ಶೀಘ್ರ ಬಾಡಿಗೆ ಪಾವತಿಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.ಕೊರೋನಾದಿಂದ ಸಾಕಷ್ಟು ಜನರ ಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಆದರೂ ಸಹ ಅನಿವಾರ್ಯವಾಗಿ ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಜೀವ ಉಳಿದರೆ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬಹುದು ಎಂಬುದನ್ನು ನಾಗರೀಕರು ಮನಗಾಣಬೇಕೆಂದು ತಿಳಿಸಿದ್ದಾರೆ.