ಕೊರೋನಾಕ್ಕೆ ಪತ್ರಕರ್ತನ ಸಾವು: ರಾಜ್ಯ ಸರ್ಕಾರದಿಂದ 5 ಲಕ್ಷ ರೂ.ಗಳ ನೆರವಿಗೆ ಆಗ್ರಹ

ಕಲಬುರಗಿ:ನ.15: ಮಹಾಮಾರಿ ಕೊರೋನಾ ಸೋಂಕಿಗೆ ಒಳಗಾಗಿ ಅಸುನೀಗಿದ ಪತ್ರಕರ್ತ ಗುಣಶೇಖರಸ್ವಾಮಿ ಅವರ ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರವು ಕೂಡಲೇ 5 ಲಕ್ಷ ರೂ.ಗಳ ನೆರವನ್ನು ನೀಡಬೇಕು ಎಂದು ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಅಗಲಿದ ಪತ್ರಕರ್ತ ದಿ. ಗುಣಶೇಖರಸ್ವಾಮಿ ಅವರ ನಿಧನದ ಗೌರವಾರ್ಥ ಹಮ್ಮಿಕೊಂಡಿದ್ದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಹಾಗೂ ಇತರೆ ಕಾರಣಗಳಿಂದ ಆಕಸ್ಮಿಕವಾಗಿ ಅಸುನೀಗಿದ ಪತ್ರಕರ್ತರ ಸಂತ್ರಸ್ತ ಕುಟುಂಬಕ್ಕೆ ಐದು ಲಕ್ಷ ರೂ.ಗಳ ಪರಿಹಾರವನ್ನು ನೀಡಿದ್ದು ಸ್ವಾಗತಾರ್ಹ. ಅದೇ ರೀತಿ ಗುಣಶೇಖರಸ್ವಾಮಿ ಅವರ ಕುಟುಂಬಕ್ಕೂ ಸಹ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳೂ ಸಹ ಈ ಕುರಿತು ಪ್ರಯತ್ನಿಸುವ ಮೂಲಕ ಸರ್ಕಾರದಿಂದ ಐದು ಲಕ್ಷ ರೂ.ಗಳ ನೆರವು ಸಂತ್ರಸ್ತ ಕುಟುಂಬಕ್ಕೆ ನೀಡುವ ದಿಸೆಯಲ್ಲಿ ಒತ್ತಡ ತರಬೇಕು ಎಂದು ಅವರು ಹೇಳಿದರು.
ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಸಿದ್ದು ಸುಬೇದಾರ್, ಜಿಲ್ಲಾಧ್ಯಕ್ಷ ಶರಣಬಸಪ್ಪ ಜಿಡಗಾ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ವ್ಹಿ.ಎನ್., ಹಿರಿಯ ಪತ್ರಕರ್ತೆ ಶ್ರೀಮತಿ ಶೀಲಾ ತಿವಾರಿ, ಡಿ. ಶಿವಲಿಂಗಪ್ಪ ಮುಂತಾದವರು ಮಾತನಾಡಿ, ಗುಣಶೇಖರಸ್ವಾಮಿ ಅವರು ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಗುಣಶೇಖರಸ್ವಾಮಿ ಅವರು ಪತ್ರಿಕೆಗಳನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯವಾಗಿದ್ದರು. ಉತ್ತಮ ಸಂಘಟಕರು ಆಗಿದ್ದರು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಿದ್ದಣ್ಣ ಮಾಲಗಾರ್, ಗುರುರಾಜ್ ಕುಲಕರ್ಣಿ, ಅಜೀಜುಲ್ಲಾ ಸರಮಸ್ತ್, ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ, ಶ್ರೀಶೈಲ್ ಪಾಟೀಲ್ ತಿಳಗೂಳ್, ದೇಸಾಯಿ ಸೇರಿದಂತೆ ಸಂಪಾದಕರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.